ಶಿರಸಿ: ಶಿರಸಿ ನಗರ ವ್ಯಾಪಾರ ಇತ್ತೀಚೆಗೆ ಆನೆಗಳ ಹಿಂಡು ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ ಬೆನ್ನಲ್ಲೇ ಇದೀಗ ಚಿರತೆ ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿದೆ. ತಾಲ್ಲೂಕಿನ ಸುಗಾವಿ-ಬಿದ್ರಳ್ಳಿ ರಸ್ತೆಯಲ್ಲಿ ರಾತ್ರಿ ವೇಳೆ ವಾಹನ ಸವಾರರಿಗೆ ಚಿರತೆ ಕಾಣಿಸಿಕೊಳ್ಳುತ್ತಿದೆ.
ಸುಗಾವಿ-ಬಿದ್ರಳ್ಳಿ ರಸ್ತೆಯ ಸೇತುವೆ ಮಾರ್ಗದಲ್ಲಿ ಚಿರತೆಯೊಂದು ಕಳೆದೆರಡು ದಿನಗಳಿಂದ ಓಡಾಡುತ್ತಿದ್ದು, ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ರಾತ್ರಿ ವೇಳೆಗೆ ಕಾಣಿಸಿಕೊಳ್ಳುತ್ತಿದೆ. ಇದುವರೆಗೆ ಯಾರೊಬ್ಬರ ಮೇಲೂ ಚಿರತೆ ದಾಳಿ ಮಾಡಿಲ್ಲವಾದರೂ ಚಿರತೆ ಕಾಣಿಸಿಕೊಂಡಿರುವುದು ಈ ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಆತಂಕದಲ್ಲೇ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ಅರಣ್ಯ ಪ್ರದೇಶ ಸಮೀಪವಿರುವ ಹಿನ್ನಲೆ ಕಾಡಂಚಿನ ರಸ್ತೆಯಲ್ಲಿ ಚಿರತೆ ಓಡಾಡುತ್ತಿದೆ. ಬದನಗೋಡ ಗ್ರಾಮ ಪಂಚಾಯತಿ ಸಿಬ್ಬಂದಿ ಪರಮೇಶ್ವರ ಎಂಬುವವರು ರಾತ್ರಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಚಿರತೆ ಕಂಡು ತಮ್ಮ ಮೊಬೈಲ್‌ನಲ್ಲಿ ವೀಡಿಯೋ ಚಿತ್ರೀಕರಿಸಿಕೊಂಡಿದ್ದಾರೆ. ಚಿರತೆ ವಾಹನ ಬರುತ್ತಿರುವುದನ್ನು ಕಂಡು ರಸ್ತೆಯಲ್ಲಿ ಮುಂದೆ ಓಡಿಹೋಗಿ ಕಾಡಿನಲ್ಲಿ ಮರೆಯಾಗಿದ್ದು, ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಚಿರತೆಯಿಂದ ಜನಸಾಮಾನ್ಯರಿಗೆ ತೊಂದರೆ ಉಂಟಾಗುವ ಮುನ್ನ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು, ಚಿರತೆಯನ್ನು ಅರಣ್ಯಕ್ಕೆದತ್ತ ಕಳುಹಿಸುವ ಪ್ರಯತ್ನ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.