ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ನೀಡುವ ಭರವಸೆಯನ್ನು ಸರ್ಕಾರ ಈಡೇರಿಸಿಲ್ಲ. ಸರ್ಕಾರ ಭರವಸೆ ನೀಡಿ ಮಾರ್ಚ್ 15ಕ್ಕೆ ಒಂದು ವರ್ಷವಾಗಿದ್ದು, ಮತ್ತೊಮ್ಮೆ ಹೋರಾಟ ನಡೆಸಲು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿಯ ನೇತೃತ್ವದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಲಾಗಿದೆ.
ಹೌದು, ಸಭೆಯಲ್ಲಿ ಮತ್ತೊಮ್ಮೆ ಹೋರಾಟ ನಡೆಸುವ ಬಗ್ಗೆ ಮಾತುಕತೆ ನಡೆದಿದೆ ಎಂದು ತಿಳಿದು ಬಂದಿದ್ದು, ಬಜೆಟ್ ಅಧಿವೇಶನದ ಮಾರ್ಚ್ 30ರ ಒಳಗಾಗಿ ಹಿಂದುಳಿದವರ್ಗದ ಆಯೋಗದಿಂದ ವರದಿ ಪಡೆದುಕೊಳ್ಳಬೇಕು.
ಏಪ್ರಿಲ್ 14 ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯಂದು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಯನ್ನು ಮುಖ್ಯಮಂತ್ರಿಗಳು ಘೋಷಿಸಬೇಕು ಎಂಬುವುದು ಸಮುದಾಯದ ಆಗ್ರಹವಾಗಿದ್ದು, ಏಪ್ರಿಲ್ 14 ರ ಒಳಗಾಗಿ ಮೀಸಲಾತಿ ಘೋಷಿಸದಿದ್ದರೆ, ಮತ್ತೊಮ್ಮೆ ಹೋರಾಟದ ರಣಕಹಳೆ ಮೊಳಗಿಸಲು ಚಿಂತನೆ ನಡೆಸಲಾಗಿದೆ ಎಂಬ ಮಾಹಿತಿ ದೊರೆತಿದೆ.