Jana Suraksha Scheme: ಲೀಡ್ ಬ್ಯಾಂಕ್‌ನಿಂದ ಅತ್ಯಂತ ಕಡಿಮೆ ಮೊತ್ತದಲ್ಲಿ ವಿಮೆ ಸೌಲಭ್ಯ

ಕಾರವಾರ: ಸಾರ್ವಜನಿಕರಿಗೆ ಕಡಿಮೆ ಮೊತ್ತದಲ್ಲಿ ವಿಮಾ ಸೌಲಭ್ಯ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಮಾ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಲೀಡ್ ಬ್ಯಾಂಕ್ ವತಿಯಿಂದ, ಅಕ್ಟೋಬರ್ 15 ರಿಂದ 2025ರ…

ಕಾರವಾರ: ಸಾರ್ವಜನಿಕರಿಗೆ ಕಡಿಮೆ ಮೊತ್ತದಲ್ಲಿ ವಿಮಾ ಸೌಲಭ್ಯ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಮಾ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಲೀಡ್ ಬ್ಯಾಂಕ್ ವತಿಯಿಂದ, ಅಕ್ಟೋಬರ್ 15 ರಿಂದ 2025ರ ಜನವರಿ 15ರ ವರೆಗೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಜನಸುರಕ್ಷಾ ಅಭಿಯಾನವನ್ನು ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ನಡೆಸಲಾಗುತ್ತಿದೆ.

ಈ ಅಭಿಯಾನದಲ್ಲಿ ಕೇಂದ್ರ ಸರ್ಕಾರದ ಹಣಕಾಸು ಸೇವೆಗಳ ಇಲಾಖೆಯ ಸೂಚನೆಯಂತೆ ಜಿಲ್ಲಾ ಲೀಡ್ ಬ್ಯಾಂಕ್ ಅರ್ಹ ವ್ಯಕ್ತಿಗಳಿಗೆ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY), ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯು (PMSBY) ಅಟಲ್ ಪಿಂಚಣಿ ಯೋಜನೆ(APY) ನಂತಹ ಸಾಮಾಜಿಕ ಭದ್ರತಾ ಯೋಜನೆಗಳಿಗಾಗಿ ನೋಂದಣಿ ಮತ್ತು ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ನೀಡುತ್ತಿದೆ. 

ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯು 18 ರಿಂದ 50 ವರ್ಷಗಳ ನಡುವಿನ ಎಲ್ಲಾ ಬ್ಯಾಂಕ್ ಖಾತೆದಾರರಿಗಾಗಿ ವಾರ್ಷಿಕ ರೂ.436 ರೂ ವಾರ್ಷಿಕ ಪ್ರೀಮಿಯಂನೊಂದಿಗೆ 2 ಲಕ್ಷಗಳ ಜೀವ ವಿಮೆಯ ಪ್ರಯೋಜನವನ್ನು ನೀಡಲಿದ್ದು, ಯಾವುದೇ ರೀತಿಯ ಅವಘಡಗಳಿಂದ ಮೃತಪಟ್ಟಲ್ಲಿ ಈ ವಿಮೆಯ ನೇರವು ದೊರೆಯಲಿದೆ. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯು 18-70 ವರ್ಷ ವಯಸ್ಸಿನ ಎಲ್ಲಾ ಬ್ಯಾಂಕ್ ಖಾತೆದಾರರಿಗೆ ವರ್ಷಕ್ಕೆ 20ರೂ.ಗಳ ಪ್ರೀಮಿಯಂಗೆ 2 ಲಕ್ಷಗಳ ಅಪಘಾತ ವಿಮೆ ನೆರವನ್ನು ನೀಡಲಿದ್ದು, ಅಪಘಾತದಿಂದ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದರೂ ವಿಮೆಯ ರಕ್ಷಣೆ ದೊರೆಯಲಿದೆ. 

Vijayaprabha Mobile App free

APY ಅಟಲ್ ಪಿಂಚಣಿ ಯೋಜನೆಯಿಂದ 60 ವರ್ಷ ವಯಸ್ಸಿನಿಂದ ರೂ.1000 ರಿಂದ 5000 ವರೆಗೆ ಮಾಸಿಕ ಪಿಂಚಣಿ ಪಡೆಯಬಹುದಾಗಿದ್ದು, 18 ರಿಂದ 40 ವರ್ಷಗಳ ನಡುವಿನ ಎಲ್ಲಾ ಬ್ಯಾಂಕ್ ಖಾತೆದಾರರು ಮಾಸಿಕ ಪ್ರೀಮಿಯಂ ರೂ. 42 ರಿಂದ 210 ನೊಂದಿಗೆ ಇದನ್ನು ಆರಂಭಿಸಬಹುದಾಗಿದ್ದು, ಈ ಯೋಜನೆಯಿಂದ ಜೀವನದ ಸಂಧ್ಯಾಕಾಲದಲ್ಲಿ ಗರಿಷ್ಠ ಪ್ರಯೋಜನ ಪಡೆಯಬಹುದಾಗಿದೆ. 

ಜಿಲ್ಲೆಯಲ್ಲಿ ಸೆಪ್ಟಂಬರ್ ಅಂತ್ಯದಲ್ಲಿ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯ ಅಡಿಯಲ್ಲಿ ಶೇ. 40.69 ಸಾಧನೆ ಆಗಿದ್ದು, ಸುಮಾರು 7,26,000 ಬ್ಯಾಂಕ್ ಗ್ರಾಹಕರಲ್ಲಿ 2,95,389 ಮಂದಿ ನೊಂದಣಿ ಮಾಡಿಕೊಂಡಿದ್ದಾರೆ. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯು ಅಡಿಯಲ್ಲಿ 9,41,000 ಬ್ಯಾಂಕ್ ಗ್ರಾಹಕರಲ್ಲಿ 8,18,313 ಮಂದಿ ನೊಂದಣಿ ಮಾಡಿಕೊಂಡಿದ್ದು ಶೇ. 86.96 ಸಾಧನೆ ಆಗಿದೆ. 

ಜಿಲ್ಲೆಯ ಎಲ್ಲಾ ಅರ್ಹ ಬ್ಯಾಂಕ್ ಖಾತೆದಾರರು ಅತ್ಯಂತ ಕಡಿಮೆ ಮೊತ್ತದಲ್ಲಿ ದೊರೆಯುವ ಈ ವಿಮಾ ಯೋಜನೆಗಳಲ್ಲಿ ನೊಂದಣಿ ಮಾಡಿಕೊಳ್ಳುವುದರ ಮೂಲಕ ವಿಮೆಯ ಗರಿಷ್ಠ ಪ್ರಯೋಜನ ಪಡೆಯಬಹುದಾಗಿದೆ. ಜನ ಸುರಕ್ಷಾ ಯೋಜನೆಯಡಿಯಲ್ಲಿ ನಮ್ಮ ಜಿಲ್ಲೆಯನ್ನು 100% ಸಾಧನೆ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸಬೇಕು. ಸಾರ್ವಜನಿಕರು ತಾವು ಬ್ಯಾಂಕ್ ಖಾತೆ ಹೊಂದಿರುವ ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಮತ್ತು ಅಂಚೆ ಕಚೇರಿಗಳಲ್ಲಿಯೂ ಸಹ ಈ ಯೋಜನೆಗೆ ನೊಂದಣಿ ಮಾಡಿಕೊಳ್ಳಬಹುದಾಗಿದೆ. 

ಲೀಡ್ ಬ್ಯಾಂಕ್ ವತಿಯಿಂದ ಜಿಲ್ಲೆಯಾದ್ಯಂತ ಈ ಯೋಜನೆಗಳ ಬಗ್ಗೆ ಸಾರ್ವಜನಿಕ ಶಿಬಿರಗಳನ್ನು ಆಯೋಜಿಸಿ ಸಾರ್ವಜನಿಕರಿಗೆ ಸಮಗ್ರ ಮಾಹಿತಿ ನೀಡಲಾಗುತ್ತಿದೆ ಎಂದು ಉತ್ತರ ಕನ್ನಡ ಜಿಲ್ಲೆಯ ಲೀಡ್ ಬ್ಯಾಂಕ್ ಮ್ಯಾನೇಜರ್ ಭಾರತಿ ವಸಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.