ಭಾರತ ಹಾಗೂ ಪಾಕ್ ಬಿಕ್ಕಟ್ಟಿನ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೇ 17 ರಂದು ಐಪಿಎಲ್ ಪುನರಾರಂಭಗೊಳ್ಳಲಿದೆ ಎಂದು ಬಿಸಿಸಿಐ ಘೋಷಿಸಿದ್ದು, ಆರು ಸ್ಥಳಗಳಲ್ಲಿ ಪಂದ್ಯಗಳು ನಡೆಯಲಿದ್ದು, ಜೂನ್ 3 ರಂದು ಫೈನಲ್ ನಡೆಯಲಿದೆ ಎಂದು ವರದಿಯಾಗಿದೆ.
ಹೌದು, ಮೇ 17 ರಂದು ಐಪಿಎಲ್ ಪುನರಾರಂಭಗೊಳ್ಳಲಿದ್ದು, ಮೊದಲ ಕ್ವಾಲಿಫೈಯರ್ ಪಂದ್ಯ ಮೇ 29 ರಂದು ನಡೆಯುತ್ತದೆ. ಎಲಿಮಿನೇಟರ್ ಪಂದ್ಯ ಮರುದಿನ ನಡೆಯಲಿದೆ. ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ತಂಡ ಮತ್ತು ಎಲಿಮಿನೇಟರ್‌ನಲ್ಲಿ ಗೆದ್ದ ತಂಡ ಜೂನ್ 1 ರಂದು ಎರಡನೇ ಕ್ವಾಲಿಫೈಯರ್‌ನಲ್ಲಿ ಸೆಣಸಲಿವೆ. IPL 2025 ರ ಫೈನಲ್ ಪಂದ್ಯ ವಾರಾಂತ್ಯಕ್ಕೆ ಬದಲಾಗಿ ವಾರದ ಮಧ್ಯದಲ್ಲಿ (ಮಂಗಳವಾರ) ನಡೆಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ.
RCB ಮೊದಲ ಪಂದ್ಯ ಯಾವಾಗ?
IPL ಟೂರ್ನಿ ಮೇ 17 ರಂದು (ಶನಿವಾರ) ಪುನಾರಂಭವಾಗಲಿದ್ದು, ಅಂದೇ ನಡೆಯಲಿರುವ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕಣಕ್ಕಿಳಿಯಲಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ RCB, KKR ತಂಡವನ್ನು ಎದುರಿಸಲಿದೆ. ಮೇ 23 ರಂದು ನಡೆಯಲಿರುವ ಪಂದ್ಯದಲ್ಲಿ RCB, SRH ವಿರುದ್ಧ ಸೆಣಸಲಿದೆ. ಈ ಪಂದ್ಯವೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆಯಲಿದೆ. ತನ್ನ ಕೊನೆಯ ಲೀಗ್ ಪಂದ್ಯವನ್ನು ಮೇ 27 ರಂದು RCB, LSG ತಂಡವನ್ನು ಎದುರಿಸಲಿದೆ. ಈ ಮೂರೂ ಪಂದ್ಯಗಳು RCBಗೆ ನಿರ್ಣಾಯಕವಾಗಿವೆ
ಆರ್‌ಸಿಬಿಗೆ ಈಗಲೂ ಪ್ಲೇ ಆಫ್ ಗ್ಯಾರಂಟಿಯಿಲ್ಲ; ಬೇಕಿದೆ ಗೆಲುವು..
ಆರ್‌ಸಿಬಿ ಈಗಾಗಲೇ 11 ಪಂದ್ಯಗಳಲ್ಲಿ 8 ಗೆಲುವುಗಳೊಂದಿಗೆ 16 ಅಂಕಗಳನ್ನು ಗಳಿಸಿದೆ. ಮತ್ತೆ ಮೂರು ಲೀಗ್ ಹಂತದ ಪಂದ್ಯಗಳು ಬಾಕಿಯಿದ್ದು, ಇವುಗಳಲ್ಲಿ ಕನಿಷ್ಠ 1 ಪಂದ್ಯ ಗೆದ್ದರೆ, ತಂಡ ಪ್ಲೇಆಫ್‌ಗೆ ಪ್ರವೇಶ ಪಡೆಯುವ ಸಾಧ್ಯತೆ ಇದೆ. ಆರ್‌ಸಿಬಿ, ಲಖನೌ, ಹೈದರಾಬಾದ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯಗಳನ್ನು ಆಡುವುದು ಬಾಕಿ ಉಳಿದಿದೆ. ಈ ಮೂರು ತಂಡಗಳು ಈ ಸೀಸನ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ, ಆರ್‌ಸಿಬಿಗೆ ಪ್ಲೇಆಫ್ ಪ್ರವೇಶದ ದಾರಿ ಸುಲಭವಾಗುವ ಸಾಧ್ಯತೆಯಿದೆ.