ಬೆಂಗಳೂರು: ಜನ ಯುಗಾದಿ ಸಂಭ್ರಮದಲ್ಲಿರುವ ಮಧ್ಯೆ ಮುಂದಿನ 5 ದಿನಗಳ ಕಾಲ ರಾಜ್ಯದ ಹಲವು ಭಾಗಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡದಲ್ಲಿ ಇಂದಿನಿಂದ ಏಪ್ರಿಲ್ 16 ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಕೊಡಗು, ಚಾಮರಾಜನಗರ, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗದಲ್ಲಿ ಏಪ್ರಿಲ್ 14 ರಿಂದ ಮುಂದಿನ 3 ದಿನಗಳ ಕಾಲ ಭಾರೀ ಮಳೆಯಾಗಲಿದ್ದು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಿದೆ.
ಐದು ದಿನಗಳು ದೇಶದ ವಿವಿಧ ಭಾಗಗಳಲ್ಲಿ ಮಳೆ ಸಾಧ್ಯತೆ:
ಇನ್ನು ಚಂಡಮಾರುತದಿಂದಾಗಿ ಮುಂದಿನ ಐದು ದಿನಗಳಲ್ಲಿ ಕರ್ನಾಟಕ ರಾಜ್ಯ ಸೇರಿದಂತೆ ದೇಶದ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.
ಹೌದು ತಮಿಳುನಾಡು, ಕೇರಳ, ಕರ್ನಾಟಕ, ಮಧ್ಯಪ್ರದೇಶ, ವಿದರ್ಭ, ತೆಲಂಗಾಣ, ಛತ್ತೀಸ್ ಘಡ್, ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್‌ನಲ್ಲಿ ಗುಡುಗು, ಮಿಂಚು ಸಹಿತ ಭಾರಿ ಗಾಳಿಯೊಂದಿಗೆ ಮಳೆಯಾಗಲಿದೆ ಎಂದು ತಿಳಿಸಿದೆ.
ಇನ್ನು, ಜಮ್ಮು, ಕಾಶ್ಮೀರ, ಲಡಾಖ್, ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಮುಜಫರಾಬಾದ್ ಮತ್ತು ಹಿಮಾಚಲ ಪ್ರದೇಶದಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಹೆಚ್ಚಿದೆಯೆಂದು ತಿಳಿಸಿದೆ.