ಮಂಗಳೂರು: ಮದುವೆ ಆದ ಮೊದಲ ರಾತ್ರಿಯೇ ಮದುಮಗಳು ಹೃದಯಾಘಾತದಿಂದ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಮಂಗಳೂರಿನಲ್ಲಿ ಹೊರವಲಯದ ಅಡ್ಯಾರ್ ಕಣ್ಣೂರಿನಲ್ಲಿ ಸೋಮವಾರ ನಡೆದಿತ್ತು.
ಅಡ್ಯಾರಿನ ಜಮಾತ್ ಅಧ್ಯಕ್ಷ ಕೆಹೆಚ್‌ಕೆ ಅಬ್ದುಲ್ಲ ಕರೀಂ ಹಾಜಿಯ ಪುತ್ರಿ ಲೈಲಾ ಆಫಿಯಾ(23) ಮೃತರಾಗಿದ್ದು, ಲೈಲಾ ಅವರ ಮದುವೆ ಭಾನುವಾರ ಅಲ್ಲಿನ ಜುಮಾ ಮಸೀದಿಯಲ್ಲಿ ಕಣ್ಣೂರಿನ ಮುಬಾರಕ್ ಎಂಬುವವರೊಂದಿಗೆ ನಡೆದಿತ್ತು.
ಭಾನುವಾರ ರಾತ್ರಿ ಔತಣಕೂಟದ ಬಳಿಕ ರಾತ್ರಿ ಸಂಪ್ರದಾಯದಂತೆ ವಧು-ವರರು ಗಂಡನ ಮನೆಗೆ ತೆರಳಿದ್ದರು. ಮುಂಜಾನೆ 3 ಗಂಟೆ ವೇಳೆ ತೀವ್ರ ಹೃದಯಾಘಾತದಿಂದ ನವವಧು ಲೈಲಾ ಆಫಿಯಾ ಕೊನೆಯುಸಿರೆಳೆದಿದ್ದು, ನೂರಾರು ಕನಸುಗಳೊಂದಿಗೆ ಮದ್ವೆ ಆಗಿದ್ದವರ ಬಾಳಲ್ಲಿ ಬಂದೆರಗಿದ ಅಕಾಲಿಕ ಸಾವಿಗೆ ಎರಡೂ ಕುಟುಂಬ ಕಂಗಾಲಾಗಿದ್ದು, ಸಂಭ್ರಮದಲ್ಲಿದ್ದ ಕುಟುಂಬಗಳು ಶೋಕಸಾಗರದಲ್ಲಿ ಮುಳುಗಿದೆ.