ಬೆಂಗಳೂರು: ಗ್ರಾಮೀಣ ಜನತೆಗೆ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, 10 ಲಕ್ಷ ರೂ. ಗಿಂತ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸುವವರಿಗೆ ಕಡಿಮೆ ದರದಲ್ಲಿ ಮರಳು ನೀಡಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಅವರು ಹೇಳಿದ್ದಾರೆ.
ವಿಧಾನ ಪರಿಷತ್ ನಲ್ಲಿ ಮಾತನಾಡಿದ ಸಚಿವ ಮುರುಗೇಶ ನಿರಾಣಿ ಅವರು, 10 ಲಕ್ಷ ರೂ. ಗಿಂತ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸುವವರಿಗೆ ಕಡಿಮೆ ದರದಲ್ಲಿ, ಬಡವರಿಗೆ ಅನುಕೂಲವಾಗುವಂತೆ ಮರಳು ಹಾಗೂ ಕಲ್ಲು ಪೂರೈಸಲು ಹೊಸ ಗಣಿ ನೀತಿ ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು, ಸ್ಪೋಟಕ ಬಳಕೆಗೆ ಹೆಚ್ಚಿನ ಜನ ಲೈಸೆನ್ಸ್ ಪಡೆದುಕೊಂಡಿಲ್ಲ. ಎಲ್ಲರೂ ಕಡ್ಡಾಯವಾಗಿ ಲೈಸೆನ್ಸ್ ಪಡೆಯುವಂತೆ ಕ್ರಮಕೈಗೊಳ್ಳಲಾಗಿದೆ ಎಂದಿದ್ದು, ಸ್ಪೋಟಕಗಳ ಲೈಸೆನ್ಸ್ ಪಡೆಯಲು 60 ದಿನಗಳ ಕಾಲಾವಕಾಶ ನೀಡಲು ಸರ್ಕಾರ ಮುಂದಾಗಿದೆ ಎಂದು ಸಚಿವ ಮುರುಗೇಶ ನಿರಾಣಿ ಅವರು ಹೇಳಿದ್ದಾರೆ.