ಬೆಂಗಳೂರು: ರಾಜಧಾನಿಯಲ್ಲಿರುವ ಸಸ್ಯಕಾಶಿ ಲಾಲ್‌ಬಾಗ್ ಪ್ರವೇಶ ಮತ್ತಷ್ಟು ದುಬಾರಿಯಾಗಿದ್ದು, ಸಾರ್ವಜನಿಕರ ಪ್ರವೇಶ ಶುಲ್ಕ ಮತ್ತು ವಾಹನ ನಿಲುಗಡೆ ಶುಲ್ಕವನ್ನು ಹೆಚ್ಚಿಸಿರುವ ತೋಟಗಾರಿಕೆ ಇಲಾಖೆ ವಯಸ್ಕರಿಗೆ ₹50 ಮತ್ತು ಮಕ್ಕಳಿಗೆ ₹20 ಶುಲ್ಕ ನಿಗದಿಪಡಿಸಿದೆ.
ಪರಿಷ್ಕೃತ ಪ್ರವೇಶ ಶುಲ್ಕ ವಯಸ್ಕರಿಗೆ ₹50 (ಹಿಂದಿನ ದರ ₹30), ಮಕ್ಕಳಿಗೆ ₹20 (₹10) ನಿಗದಿ ಮಾಡಲಾಗಿದೆ. ವಾಹನ ನಿಲುಗಡೆ ಶುಲ್ಕವನ್ನು ಜಾಸ್ತಿ ಮಾಡಿದ್ದು, ಕಾರು ₹60 (ಹಿಂದಿನ ದರ ₹40), ಮಿನಿ ಬಸ್ ₹100 (₹70), ಬಸ್ ₹200 (₹110) ನಿಗದಿಪಡಿಸಲಾಗಿದೆ. ಆದರೆ, ದ್ವಿಚಕ್ರ ವಾಹನಗಳ ಪ್ರವೇಶ ಶುಲ್ಕ ₹30 ಇದ್ದು ಯಾವುದೇ ಬದಲಾವಣೆ ಮಾಡಿಲ್ಲ.
ಕಳೆದ ನಾಲ್ಕು ವರ್ಷಗಳಿಂದ ಪ್ರವೇಶ ಶುಲ್ಕ ಮತ್ತು ನಿಲುಗಡೆ ಶುಲ್ಕವನ್ನು ಹೆಚ್ಚಳ ಮಾಡಿರಲಿಲ್ಲ. ಪ್ರಸ್ತುತ ಉದ್ಯಾನದ ಭದ್ರತೆ, ಸ್ವಚ್ಛತೆ, ಜಲ ನಿರ್ವಹಣೆ ಮತ್ತು ವಿದ್ಯುತ್ ಬಳಕೆಯೂ ಜಾಸ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಉದ್ಯಾನದ ನಿರ್ವಹಣೆ ವೆಚ್ಚವೂ ಹೆಚ್ಚಾಗಿದ್ದು ಅನಿವಾರ್ಯವಾಗಿ ಪ್ರವೇಶ ಶುಲ್ಕ ಮತ್ತು ವಾಹನ ನಿಲುಗಡೆ ಶುಲ್ಕ ಪರಿಷ್ಕರಣೆ ಮಾಡಲಾಗಿದೆ ಎಂದು ತೋಟಗಾರಿಕೆ ಇಲಾಖೆ(ಪಾರ್ಕ್ಸ್ ಆ್ಯಂಡ್ ಗಾರ್ಡನ್ಸ್) ಜಂಟಿ ನಿರ್ದೇಶಕ ಡಾ। ಎಂ.ಜಗದೀಶ್ ತಿಳಿಸಿದ್ದಾರೆ.
ವಂಡರ್ ಲಾ, ಬನ್ನೇರುಘಟ್ಟ ಪ್ರಾಣಿ ಸಂಗ್ರಹಾಲಯ ಸೇರಿದಂತೆ ಇತರೆ ಪ್ರವಾಸಿ ತಾಣಗಳ ಪ್ರವೇಶ ಶುಲ್ಕಕ್ಕೆ ಹೋಲಿಕೆ ಮಾಡಿದರೆ ಲಾಲ್‌ಬಾಗ್ ಪ್ರವೇಶ ಶುಲ್ಕ ಜನಸ್ನೇಹಿಯಾಗಿದೆ. ಜನರಿಂದ ಮತ್ತು ವಾಹನಗಳಿಂದ ಸಂಗ್ರಹಿಸಿದ ಹಣವನ್ನು ಉದ್ಯಾನದ ಅಭಿವೃದ್ಧಿ ಮತ್ತು ನಿರ್ವಹಣೆಗೆ ವಿನಿಯೋಗಿಸಲಾಗುತ್ತದೆ ಎಂದಿದ್ದಾರೆ.