ಬೆಂಗಳೂರು: ಆ್ಯಪ್ ಆಧಾರಿತ ಇ-ಕಾಮರ್ಸ್ ವಿತರಕ ಸವಾರರ ವಿರುದ್ಧ ಶನಿವಾರ ವಿಶೇಷ ಕಾರ್ಯಾಚರಣೆ ನಡೆಸಿರುವ ನಗರ ಸಂಚಾರ ಪೊಲೀಸರು, ಸಂಚಾರ ನಿಯಮ ಉಲ್ಲಂಘಿಸಿದ ಆರೋಪದಡಿ 2,679 ಪ್ರಕರಣಗಳನ್ನು ದಾಖಲಿಸಿ, ₹13.78 ಲಕ್ಷ ದಂಡ ವಸೂಲಿ ಮಾಡಿದ್ದಾರೆ.
ನಗರದಲ್ಲಿ ಇತ್ತೀಚೆಗೆ ಆ್ಯಪ್ ಆಧಾರಿತ ಟ್ಯಾಕ್ಸಿ, ಫುಡ್ ಡೆಲಿವರಿ ಸೇರಿ ಇ-ಕಾಮರ್ಸ್ ವಿತರಕ ಸವಾರರ ವಿರುದ್ಧ ಸಂಚಾರ ನಿಯಮ ಉಲ್ಲಂಘನೆ ಕುರಿತು ಸಾಕಷ್ಟು ದೂರುಗಳು ಬಂದಿದ್ದವು. ಈ ಹಿನ್ನೆಲೆ ಶನಿವಾರ ನಗರದ ಎಲ್ಲ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಇ-ಕಾಮರ್ಸ್ ವಿತರಕ ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಸಂಚಾರ ನಿಯಮ ಉಲ್ಲಂಘಿಸಿದ ಸವಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಹೆಲ್ಮೆಟ್ ರಹಿತ ಚಾಲನೆ 781, ಚಾಲನೆ ವೇಳೆ ಮೊಬೈಲ್ ಬಳಕೆ 26, ಸಿಗ್ನಲ್ ಜಂಪ್ 45, ನೋ ಎಂಟ್ರಿ 404, ಟ್ರಿಪಲ್ ರೈಡಿಂಗ್ 52, ನೋ ಪಾರ್ಕಿಂಗ್ 105, ದೋಷಪೂರಿತ ನೋಂದಣಿ ಫಲಕ 119, ಒನ್ ವೇ ಚಾಲನೆ 319, ಹಿಂಬದಿ ಸವಾರ ಹೆಲ್ಮೆಟ್ ರಹಿತ ಚಾಲನೆ 643, ಫುಟ್‌ಪಾತ್ ಪಾರ್ಕಿಂಗ್ 34, ನೋಂದಣಿ ಫಲಕ ಇಲ್ಲದೆ ವಾಹನ ಚಾಲನೆ 25 ಹಾಗೂ ಇತರೆ ಸಂಚಾರ ನಿಯಮ ಉಲ್ಲಂಘನೆ ಸೇರಿ ಒಟ್ಟು 2,670 ಪ್ರಕರಣ ದಾಖಲಿಸಿ, 13.78 ಲಕ್ಷ ರು. ದಂಡ ವಸೂಲಿ ಮಾಡಲಾಗಿದೆ. ಈ ವಿಶೇಷ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಸಂಚಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.