ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರೂ ಮೊಬೈಲ್ ಫೋನ್ ಗೆ ಅಡಿಕ್ಟ್ ಆಗಿದ್ದಾರೆ. ಆದರೆ ಎಷ್ಟೋ ಮಂದಿ ಮೊಬೈಲ್ ಬಳಸಿದ್ರೆ ಕ್ಯಾನ್ಸರ್ ಬರುತ್ತೆ ಅಂತಾರೆ. ಹಾಗಿದ್ರೆ ಇದು ನಿಜಾನಾ! ಅಧ್ಯಯನ ಹೇಳುವುದನ್ನು ನೋಡೋದಾದ್ರೆ,
ಮೊಬೈಲ್ ಗಳಿಂದ ಮೆದುಳಿನ ಕ್ಯಾನ್ಸರ್ ಅಥವಾ ಇತರೆ ತಲೆ ಮತ್ತು ಕುತ್ತಿಗೆ ಕ್ಯಾನ್ಸರ್ ಗಳು ಬರುವುದಿಲ್ಲ ಎಂದು ಪುರಾವೆಗಳಿಂದ ಬಹಿರಂಗವಾಗಿದೆ.” ಎಂದು ಪ್ರಮುಖ ಲೇಖಕ ಕೆನ್ ಕರಿಪಿಡಿಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಸ್ಟ್ರೇಲಿಯಾದ ವಿಕಿರಣ ರಕ್ಷಣೆ ಮತ್ತು ಪರಮಾಣು ಸುರಕ್ಷತಾ ಸಂಸ್ಥೆ (ಅರ್ಪನ್ಸಾ) ಈ ವಿಷಯದ ಬಗ್ಗೆ 5,000 ಕ್ಕೂ ಹೆಚ್ಚು ಅಧ್ಯಯನಗಳನ್ನು ಪರಿಶೀಲಿಸಿದೆ, 22 ದೇಶಗಳ 63 ಅಧ್ಯಯನಗಳನ್ನು ಕೇಂದ್ರೀಕರಿಸಿದೆ ಎಂಬುದು ತಿಳಿದು ಬಂದಿದೆ. ಮೊಬೈಲ್ ಫೋನ್ ಗಳು ಮತ್ತು ವೈರ್ ಲೆಸ್ ತಂತ್ರಜ್ಞಾನದಿಂದ ಹೊರಸೂಸುವ ರೇಡಿಯೋ ತರಂಗಗಳು ದೇಹವನ್ನು ನೇರವಾಗಿ ಹಾನಿಗೊಳಿಸುವಷ್ಟು ಶಕ್ತಿಯನ್ನು ಹೊಂದಿಲ್ಲ ಎಂಬುದಕ್ಕೆ ಪುರಾವೆಗಳು ಲಭ್ಯವಾಗಿದ್ದು ಇಲ್ಲಿಯವರೆಗೆ, ಯಾವುದೇ ಅಧ್ಯಯನಗಳು ಮೊಬೈಲ್ ಫೋನ್ ಬಳಕೆ ಮತ್ತು ಕ್ಯಾನ್ಸರ್ ನಡುವೆ ಸಂಬಂಧವಿದೆ ಎಂಬುದನ್ನು ದೃಢಪಡಿಸಿಲ್ಲ.
ಆದ್ದರಿಂದ ವೈರ್ ಲೆಸ್ ತಂತ್ರಜ್ಞಾನಗಳು ಕ್ಯಾನ್ಸರ್ ಗೆ ಕಾರಣವಾಗುವುದಿಲ್ಲ ಎಂದು ಹೇಳಬಹುದಾಗಿದೆ. ಮೊಬೈಲ್ ಫೋನ್ ಗಳು ರೇಡಿಯೋಫ್ರೀಕ್ವೆನ್ಸಿ (ಆರ್ ಎಫ್) ತರಂಗಗಳನ್ನು ಬಳಸಿಕೊಂಡು ಸಂಕೇತಗಳನ್ನು ವಿನಿಮಯ ಮಾಡಿಕೊಳ್ಳುತ್ತವೆ. ಫೋನ್ ನೆಟ್ ವರ್ಕ್ ಗಳು ಬಳಸುವ ರೇಡಿಯೋಫ್ರೀಕ್ವೆನ್ಸಿ ತರಂಗಗಳು ಅಯಾನೀಕರಣವಲ್ಲದ ವಿಕಿರಣದ ಒಂದು ರೂಪವಾಗಿದೆ. ಈ ವಿಕಿರಣವು ಡೇಟಾವನ್ನು ರವಾನಿಸಲು ಸಣ್ಣ ಪ್ರಮಾಣದ ಶಕ್ತಿಯನ್ನು ಬಳಸುತ್ತದೆ, ಮಾನವ ದೇಹ ಅಥವಾ ಡಿಎನ್ಎ (ಜೀನ್ಗಳು) ಗೆ ಹಾನಿ ಮಾಡಲು ಬೇಕಾಗುವಷ್ಟು ಶಕ್ತಿಯನ್ನು ಹೊಂದಿರುವುದಿಲ್ಲ. ಎಲ್ಲಾ 4 ಜಿ, 5 ಜಿ, ವೈ- ಫೈ ಮತ್ತು ಬ್ಲೂಟೂತ್ ಡೇಟಾವನ್ನು ರವಾನಿಸಲು ರೇಡಿಯೋ ತರಂಗಗಳನ್ನು ಅವಲಂಬಿಸಿದ್ದರೂ, ದೇಹದ ಅಂಗಾಂಶಗಳನ್ನು ಬಿಸಿ ಮಾಡಲು ಅಥವಾ ಡಿಎನ್ಎಗೆ ಹಾನಿ ಮಾಡಲು ಸಾಧ್ಯವಿಲ್ಲ ಎಂದು ಅಧ್ಯಯನ ತಿಳಿಸಿದೆ.
ಭಾರತವು 1.2 ಬಿಲಿಯನ್ ಮೊಬೈಲ್ ಫೋನ್ ಬಳಕೆದಾರರನ್ನು ಮತ್ತು 600 ಬಿಲಿಯನ್ ಸ್ಮಾರ್ಟ್ಫೋನ್ ಬಳಕೆದಾರರನ್ನು ಹೊಂದಿದೆ. ಸ್ಮಾರ್ಟ್ಫೋನ್ ವಿಭಾಗದಲ್ಲಿ ಈ ಸಂಖ್ಯೆ 1.55 ಬಿಲಿಯನ್ ತಲುಪುವ ನಿರೀಕ್ಷೆಯಿದೆ ಏಮ್ಸ್ ಡಾ. ಅಭಿಷೇಕ್ ಶಂಕರ್ ಹೇಳುವ ಪ್ರಕಾರ, “ಸೆಲ್ ಫೋನ್ಗಳಿಂದ ಬರುವ ವಿಕಿರಣವು ಅಯಾನೀಕರಣಗೊಳ್ಳುವುದಿಲ್ಲ ಹಾಗಾಗಿ ಅವು ಕ್ಯಾನ್ಸರ್ ಗೆ ಕಾರಣವಾಗುವುದಿಲ್ಲ. ಮತ್ತೊಂದೆಡೆ, ಎಕ್ಸ್- ರೇ ಯಂತ್ರದಿಂದ ಬರುವ ವಿಕಿರಣವು ಅಯಾನೀಕರಣಗೊಳ್ಳುವುದರಿಂದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು ಎಂದು ಡಾ. ಶಂಕರ್ ಹೇಳಿದ್ದಾರೆ.
ಅಲ್ಲದೆ ಎಲ್ಲ ತಜ್ಞರು ಹೇಳುವಂತೆ ಧೂಮಪಾನದಂತಹ ಅಭ್ಯಾಸಗಳನ್ನು ಮಿತಿಗೊಳಿಸಲು ಶಿಫಾರಸು ಮಾಡುತ್ತಾರೆ. ಅಲ್ಲದೆ ಮೊಬೈಲ್ ಫೋನ್ ಗಳ ಬಳಕೆಯನ್ನು ಆದಷ್ಟು ಮಿತಿಗೊಳಿಸಲು ಶಿಫಾರಸು ಮಾಡುತ್ತಾರೆ, ಇಲ್ಲವಾದಲ್ಲಿ ಇದರಿಂದ ತಲೆನೋವು, ಆತಂಕ ಮತ್ತು ಶ್ರವಣ ನಷ್ಟಕ್ಕೆ ಕಾರಣವಾಗಬಹುದು.