ಬಹಳ ಜನರಿಗೆ ಬೆನ್ನು ಬಿಡದೇ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತಲೇ ಇರುತ್ತದೆ. ಗ್ಯಾಸ್ಟ್ರಿಕ್ ಸಾಮಾನ್ಯ ಆರೋಗ್ಯ ಸಮಸ್ಯೆ ಎಂದರೂ ಆ ನೋವು ಅನುಭವಿಸಿದಾಗಲೇ ಬೆಟ್ಟದಷ್ಟು ದೊಡ್ಡದಿದೆ ಎಂದೆನ್ನಿಸಿ ಬಿಡುತ್ತದೆ. ಯಾವು ನೋವು ಆಗಬಹುದು ಆದರೆ ಗ್ಯಾಸ್ಟ್ರಿಕ್ ಮಾತ್ರ ಬೇಡಪ್ಪಾ ಅನ್ನುವವರು ನಮ್ಮಲ್ಲಿದ್ದಾರೆ. ಅವರಿಗಾಗಿ ಗ್ಯಾಸ್ಟ್ರಿಕ್ ಹೋಗಲಾಡಿಸಲು ಸುಲಭವಾಗಿ ಮನೆಯಲ್ಲೇ ಕಂಡುಕೊಳ್ಳಬಹುದಾದ ಪರಿಹಾರ ಇಲ್ಲಿದೆ ನೋಡಿ.
ಗ್ಯಾಸ್ಟ್ರಿಕ್ ಪರಿಹಾರಕ್ಕೆ ಮನೆಮದ್ದು ಓಮಕಾಳು: ಸಾಮಾನ್ಯವಾಗಿ ಅಡುಗೆಯಲ್ಲಿ ಓಮಕಾಳನ್ನು ಬಳಸುತ್ತೇವೆ. ಪದಾರ್ಥದಲ್ಲಿ ರುಚಿ ಸವಿಯಲು ಓಮಕಾಳನ್ನು ಬಳಸುತ್ತೇವೆ. ಹಾಗೆಯೇ ಗ್ಯಾಸ್ಟ್ರಿಕ್ ಸಮಸ್ಯೆ ಪರಿಹಾರವಾಗಿಯೂ ಓಮಕಾಳನ್ನು ಬಳಸಲಾಗುತ್ತದೆ. ಒಂದು ಲೋಟ ನೀರಿಗೆ ಅರ್ಧ ಚಮಚ ಓಮಕಾಳನ್ನು ಹಾಕಿ, ಒಂದೆರಡು ಪುದೀನಾ ಎಲೆ ಹಾಗಿ ಚೆನ್ನಾಗಿ ಕುದಿಸಿ. ನಂತರ ಸಿದ್ಧಗೊಂಡ ಕಷಾಯವನ್ನು ಸೇವಿಸುವುದರಿಂದ ಗ್ಯಾಸ್ಟ್ರಿಕ್ ಕಡಿಮೆ ಮಾಡಿಕೊಳ್ಳಬಹುದು.
ಜೀರಿಗೆ: ಜೀರಿಗೆ ಲಾಲಾರಸದ ಉತ್ಪಾದನೆಗೆ ಸಹಾಯ ಮಾಡುತ್ತದೆ. ಹಾಗೂ ಜೀರಿಗೆ, ಜೀರ್ಣಕ್ರಿಯೆಗೆ ಅನುಕೂಲವಾಗುತ್ತದೆ. ಹೊಟ್ಟೆ ನೋವು, ಎದೆ ಉರಿಯಂತಹ ಸಮಸ್ಯೆಗೆ ಜೀರಿಗೆಯನ್ನು ಸೇವಿಸುತ್ತಾರೆ.
ಇಂಗು: ಗ್ಯಾಸ್ ಉತ್ಪಾದನೆ ಮಾಡುವ ಬ್ಯಾಕ್ಟೀರಿಯಾಗಳನ್ನು ಇಂಗು ನಾಶಪಡಿಸುತ್ತದೆ. ಹಾಗಾಗಿ ಬೆಚ್ಚಗಿನ ನೀರಿನಲ್ಲಿ ಚೂರೇ ಚೂರು ಇಂಗಿನಕಾಳನ್ನು ಹಾಕಿ, ನೀರನ್ನು ಕುಡಿಯುವುದರಿಂದ ಗ್ಯಾಸ್ ಉತ್ಪಾದನೆ ಕಡಿಮೆ ಮಾಡಬಹುದು.
ಶುಂಠಿ: ಸಾಮಾನ್ಯವಾಗಿ ಅಡುಗೆಯಲ್ಲಿ ಹೆಚ್ಚು ಶುಂಠಿಯನ್ನು ಬಳಸುತ್ತಾರೆ. ಶುಂಠಿ ಆರೋಗ್ಯಕ್ಕೆ ಉತ್ತಮವೂ ಹೌದು. ತಲೆ ನೋವು ಕಾಣಿಸಿಕೊಂಡಾಗ ಶುಂಠಿಯನ್ನು ತೇಯ್ದು(ಪೇಸ್ಟ್) ಹಣೆಗೆ ಹಚ್ಚಿಕೊಳ್ಳುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಹಾಗೆಯೇ ಗ್ಯಾಸ್ಟ್ರಿಕ್ ಸಮಸ್ಯೆಗೂ ಶುಂಠಿ ಒಳ್ಳೆಯ ಮದ್ದಾಗಿದ್ದು, ಶುಂಠಿ ಚೂರನ್ನು ನೀರಿನಲ್ಲಿ ಹಾಕಿ ಅದನ್ನು ಕುಡಿಯುವುದರಿಂದ ಗ್ಯಾಸ್ ಟ್ರಬಲ್ನಿಂದ ಪರಿಹಾರ ಕಂಡುಕೊಳ್ಳಬಹುದು. ಇಲ್ಲವೇ, ಶುಂಠಿ ಚೂರಿಗೆ ಸ್ವಲ್ಪ ಉಪ್ಪು ಜೊತೆಗೆ ಲಿಂಬು ರಸ ಸೇವಿಸುವುದರಿಂದ ಹೊಟ್ಟೆನೋವು, ಗ್ಯಾಸ್ಟ್ ಟ್ರಬಲ್ಗೆ ಪರಿಹಾರ ಕಂಡುಕೊಳ್ಳಬಹುದು.
ಪುದೀನ ಚಹಾ: ಪುದೀನಾ ಎಲೆಗಳನ್ನು ಜಗಿಯುವುದು ಅಥವಾ ಪುದೀನಾ ಟೀ ಕುಡಿಯುವುದರಿಂದ ಹೊಟ್ಟೆಯ ಗ್ಯಾಸ್ ಸಮಸ್ಯೆಯಿಂದ ಶೀಘ್ರ ಪರಿಹಾರ ಸಿಗುತ್ತದೆ.
ಕ್ಯಾಮೊಮೈಲ್ ಟೀ : ಕ್ಯಾಮೊಮೈಲ್‌ನಿಂದ ಮಾಡಿದ ಚಹಾವನ್ನು ಕುಡಿಯುವುದು ಉತ್ತಮ ಫಲಿತಾಂಶವನ್ನು ನೀಡುತ್ತದೆ.
ಆಕ್ಟಿವೇಟೆಡ್ ಚಾರ್ಕೋಲ್ ಮಾತ್ರೆಗಳು: ಹೊಟ್ಟೆಯಲ್ಲಿ ಅಧಿಕ ಗ್ಯಾಸ್ನಿಂದ ಬಳಲುತ್ತಿದ್ದರೆ ವೈದ್ಯರ ಸಲಹೆಯಂತೆ ಆಕ್ಟಿವೇಟೆಡ್ ಚಾರ್ಕೋಲ್ ಮಾತ್ರೆಗಳನ್ನು ಸೇವಿಸಿ ಗ್ಯಾಸ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಆಪಲ್ ಸೈಡರ್ ವಿನೆಗರ್ : ನಿಮ್ಮ ಹೊಟ್ಟೆ ಗ್ಯಾಸ್ಟ್ರಿಕ್ನಿಂದ ಪರಿಹಾರ ಕಂಡುಕೊಳ್ಳಲು ನೀವು ಆಪಲ್ ಸೈಡರ್ ವಿನೆಗರ್ ಅನ್ನು ನೀರು ಮತ್ತು ಚಹಾದೊಂದಿಗೆ ಸೇವಿಸಿದರೆ ತ್ವರಿತ ಪರಿಹಾರವನ್ನು ಪಡೆಯಬಹುದು.
ಲವಂಗ : ಗ್ಯಾಸ್ ಸಮಸ್ಯೆ ತುಂಬಾ ತೀವ್ರವಾಗಿದ್ದರೆ ಲವಂಗವನ್ನು ತಿನ್ನುವುದು ಉತ್ತಮ. ಲವಂಗದ ಎಣ್ಣೆಯನ್ನು ಆಹಾರದಲ್ಲಿ ಬಳಸುವುದರಿಂದ ಪರಿಹಾರವನ್ನು ಪಡೆಯಬಹುದು.