ನಮ್ಮ ದೈನಂದಿನ ಆಹಾರದಲ್ಲಿ ಬೆಳ್ಳುಳ್ಳಿ ಪ್ರಮುಖ ಪಾತ್ರ ವಹಿಸುತ್ತದೆ. ಬೆಳ್ಳುಳ್ಳಿ ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಆದರೆ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರೆ ಆರೋಗ್ಯದ ಮೇಲೂ ಹಾನಿಯಾಗುತ್ತದೆ.
ಹೌದು. ಆರೋಗ್ಯಕ್ಕೆ ಒಳ್ಳೆಯದು ಎಂದು ಅತೀ ಹೆಚ್ಚಾಗಿ ಬೆಳ್ಳುಳ್ಳಿಯನ್ನು ಸೇವಿಸಬಾರದು. ಹೀಗಾಗಿ ಬೆಳ್ಳುಳ್ಳಿ ಎಷ್ಟು ಆರೋಗ್ಯಕವೂ ಅಷ್ಟೇ ಅಪಾಯಕಾರಿಯೂ ಆಗಿರುತ್ತದೆ. ಬೆಳ್ಳುಳ್ಳಿ ತಿನ್ನುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಆದರೆ, ಬೆಳ್ಳುಳ್ಳಿಯನ್ನು ಮಿತವಾಗಿ ತೆಗೆದುಕೊಳ್ಳುವುದು ಉತ್ತಮ.ಪ್ರತಿದಿನ 2-3 ಎಸಳು ಬೆಳ್ಳುಳ್ಳಿ ತಿನ್ನುವುದರಿಂದ ಮಳೆಗಾಲದಲ್ಲಿ ಬರುವ ರೋಗಗಳಿಂದ ದೂರವಿರಬಹುದು. ನೀವು ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುವುದು ಉತ್ತಮ. ಅಲ್ಲದೆ ಬೆಳ್ಳುಳ್ಳಿಯಲ್ಲಿರುವ ಆ್ಯಂಟಿ ಮೈಕ್ರೋಬಿಯಲ್ ಗುಣಗಳು ಗ್ಯಾಸ್, ಅಸಿಡಿಟಿ, ಹೊಟ್ಟೆನೋವಿನಂತಹ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಹಸಿ ಬೆಳ್ಳುಳ್ಳಿ ಎಸಳನ್ನು ತಿನ್ನುವುದರಿಂದ ಆಗುವ ದೊಡ್ಡ ಪ್ರಯೋಜನವೆಂದರೆ ಅದು ಹೊಟ್ಟೆಯಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ. ಈ ಕಾರಣದಿಂದಾಗಿ, ಮಲ ಮತ್ತು ಮೂತ್ರವು ಸರಾಗವಾಗಿ ಹೊರಹಾಕಲ್ಪಡುತ್ತದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು: ಬೆಳ್ಳುಳ್ಳಿಯನ್ನು ಅತಿಯಾದ ಪ್ರಮಾಣದಲ್ಲಿ ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಉಂಟಾಗಬಹುದು. ಉದಾಹರಣೆಗೆ ವಾಯು, ಆಮ್ಲೀಯತೆ. ಜೊತೆಗೆ ನೀವು ಜೀರ್ಣಕ್ರಿಯೆಯ ಸಮಸ್ಯೆಯಿಂದ ಬಳಲುತ್ತಿದ್ದರೆ ಬೆಳ್ಳುಳ್ಳಿಯನ್ನು ಅತಿಯಾಗಿ ಸೇವಿಸದಿರುವುದು ಒಳ್ಳೆಯದು.
ರಕ್ತವನ್ನು ತೆಳುಗೊಳಿಸುತ್ತದೆ: ಬೆಳ್ಳುಳ್ಳಿ ರಕ್ತವನ್ನು ತೆಳುಗೊಳಿಸಲು ಪರಿಣಾಮಕಾರಿಯಾಗಿದೆ. ನೀವು ಬೆಳ್ಳುಳ್ಳಿಯನ್ನು ಹೆಚ್ಚು ಸೇವಿಸಿದರೆ ರಕ್ತಸ್ರಾವದ ಅಪಾಯವು ಹೆಚ್ಚಾಗುತ್ತದೆ.
ಅಲರ್ಜಿ: ಹೆಚ್ಚು ಬೆಳ್ಳುಳ್ಳಿಯನ್ನು ಬಳಸುವುದರಿಂದ ಅಲರ್ಜಿಯ ಸಮಸ್ಯೆಗಳು ಕೂಡ ಉಂಟಾಗಬಹುದು. ಅಲರ್ಜಿಯು ಚರ್ಮದ ದದ್ದುಗಳನ್ನು ಒಳಗೊಂಡಿರುತ್ತದೆ. ಇದು ನಿಮಗೆ ಕಿರಿಕಿರಿ ಉಂಟು ಮಾಡುತ್ತದೆ. ಒಟ್ಟಿನಲ್ಲಿ ಬೆಳ್ಳುಳ್ಳಿಯನ್ನು ಲಿಮಿಟ್‌ಗಿಂದ ಹೆಚ್ಚಾಗಿ ಸೇವಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಪ್ರತಿದಿನ 2-3 ಎಸಳು ಬೆಳ್ಳುಳ್ಳಿಯನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.