ಬೆಂಗಳೂರು: ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕಾರ್ಡುದಾರರಿಗೆ ರಾಜ್ಯ ಸರ್ಕಾರ ರೂಪಿಸಿರುವ ಅನ್ನಭಾಗ್ಯ ಯೋಜನೆಗೆ 2.36 ಲಕ್ಷ ಟನ್ ಅಕ್ಕಿಯನ್ನು ಪೂರೈಸಲು ಭಾರತೀಯ ಆಹಾರ ನಿಗಮ (ಎಫ್‌ಸಿಐ) ಒಪ್ಪಿಗೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಯೋಜನೆಯಡಿ ರಾಜ್ಯ ಸರ್ಕಾರದ ನೀಡುತ್ತಿದ್ದ 5 ಕೆಜಿ ಅಕ್ಕಿ ಹಣ ಇನ್ನು ಮುಂದೆ ಫಲಾನುಭವಿಗಳಿಗೆ ಸಿಗುವುದು ಬಹುತೇಕ ಬಂದ್ ಆಗಲಿದೆ. ಹಣದ ಬದಲು ಅಕ್ಕಿಯನ್ನೇ ನೀಡಲು ಸರ್ಕಾರ ಮುಂದಾಗುತ್ತಿದೆ.
ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡಬೇಕೆಂಬ ರಾಜ್ಯ ಸರ್ಕಾರದ ಮನವಿಯನ್ನು ಕಳೆದ ವರ್ಷ ಕೇಂದ್ರ ತಿರಸ್ಕರಿಸಿತ್ತು. ಇದು ರಾಜ್ಯ ಸರ್ಕಾರ ಮತ್ತು ಕೇಂದ್ರದ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು. ಕೇಂದ್ರ ಸರ್ಕಾರ ಅಕ್ಕಿ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 5 ಕೆಜಿ ಅಕ್ಕಿ ಬದಲು ಅದರ ಹಣವನ್ನು ಸರ್ಕಾರ ಫಲಾನುಭವಿಗಳಿಗೆ ನೀಡುತ್ತಿದೆ. ತಲಾ ಒಂದು ಕೆಜಿಗೆ 34 ರೂಪಾಯಿಯಂತೆ 170 ರೂಪಾಯಿ ಖಾತೆ ನೀಡುತ್ತಿದೆ. ಒಂದು ಕುಟುಂಬ ಯಜಮಾನರ ಖಾತೆಗೆ ಸದಸ್ಯರ ಅಕ್ಕಿ ಹಣವನ್ನು ನೀಡುತ್ತಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಫ್‌ಸಿಐನ ಪ್ರಾದೇಶಿಕ ಕಚೇರಿಯ ಪ್ರಧಾನ ವ್ಯವಸ್ಥಾಪಕ ಮಹೇಶ್ವರಪ್ಪ ಬಿಒ ಅವರು, ಕರ್ನಾಟಕ ಸರ್ಕಾರ ಅನ್ನಭಾಗ್ಯ ಯೋಜನೆಗಾಗಿ 2.38 ಲಕ್ಷ ಟನ್ ಅಕ್ಕಿಯನ್ನು ಪೂರೈಸಲು ಮನವಿ ಮಾಡಿದ್ದು, ಅದನ್ನು ಪೂರೈಸಲು ನಾವು ಸಿದ್ಧರಿದ್ದೇವೆಂದು ಹೇಳಿದ್ದಾರೆ.
ಕಳೆದ ವರ್ಷ ಮುಂಗಾರು ಮಳೆಯ ಕೊರತೆಯು ಅಕ್ಕಿ ಸಂಗ್ರಹಣೆ ಮೇಲೆ ಪರಿಣಾಮ ಬೀರಿತ್ತು. ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ ಅನ್ನು ಅಮಾನತುಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮನವಿಯನ್ನು ಪರಿಗಣಿಸಲಾಗಲಿಲ್ಲ. ಈ ವರ್ಷ ಉತ್ತಮ ಮಳೆಯಾಗಿದ್ದು, ಎಫ್‌ಸಿಐ (ಕರ್ನಾಟಕ) 7.42 ಲಕ್ಷ ಟನ್ ಅಕ್ಕಿ ದಾಸ್ತಾನು ಹೊಂದಿದೆ. 2025 ರ ಮಾರ್ಚ್‌ವರೆಗೆ ಕೆಜಿಗೆ 28 ರೂ.ರಂತೆ ಕರ್ನಾಟಕ ರಾಜ್ಯಕ್ಕೆ ಅಕ್ಕಿ ಪೂರೈಸಲು ಸಿದ್ಧವಿದ್ದೇವೆಂದು ತಿಳಿಸಿದ್ದಾರೆ.
ಇದೇ ವೇಳೆ ಅಕ್ಕಿ ಖರೀದಿ ಕುರಿತು ರಾಜ್ಯ ಸರ್ಕಾರ ಭಾರತೀಯ ಆಹಾರ ನಿಗಮದ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಲಿದೆ ಎಂದೂ ಹೇಳಿದ್ದಾರೆ.
OMSS-D ಇ-ಹರಾಜು ಆಗಸ್ಟ್ 2 ರಂದು ಪ್ರಾರಂಭವಾಗಲಿದೆ. ಎಂ ಜಂಕ್ಷನ್ ಪೋರ್ಟಲ್ (www.valuejunction.in/fci) ಮೂಲಕ ಕೇಂದ್ರ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರಗಳಲ್ಲದೆ ಖಾಸಗಿಯವರು ಕೂಡ ಇ-ಹರಾಜಿನಲ್ಲಿ ಭಾಗವಹಿಸಬಹುದು. ಪ್ರತಿ ಬುಧವಾರ ಹರಾಜು ಪ್ರಕ್ರಿಯೆ ನಡೆಯಲಿದೆ. ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವವರು ಇ-ಹರಾಜಿನ ಮೂಲಕ 2,000 ಟನ್‌ಗಳಷ್ಟು ಅಕ್ಕಿಯನ್ನು ಪಡೆಯಬಹುದು.
ಅಕ್ಕಿ ವ್ಯಾಪಾರಿಗಳು ಮತ್ತು ಗಿರಣಿದಾರರು, ವಿಶೇಷವಾಗಿ ಸಣ್ಣ ವ್ಯಾಪಾರಿಗಳು ಇ-ಹರಾಜಿನಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬೇಕೆಂದು ನಾವು ಬಯಸುತ್ತೇವೆ. ಎಪಿಎಂಸಿ ಮಾರುಕಟ್ಟೆಗಳಲ್ಲಿ ಎ ಗ್ರೇಡ್ ಅಕ್ಕಿ ಕೆಜಿಗೆ 35 ರೂ. ಇದೆ. ಆದರೆ, ನಾವು (ಸಾರಿಗೆ ವೆಚ್ಚ ಹೊರತುಪಡಿಸಿ) 28 ರೂ.ಗೆ ಪೂರೈಕೆ ಮಾಡುತ್ತಿದ್ದೇವೆಂದು ಇದೇ ವೇಳೆ ಮಹೇಶ್ವರಪ್ಪ ಅವರು ಮಾಹಿತಿ ನೀಡಿದರು.