ಬೆಂಗಳೂರು: ನಟಿ ದೀಪಿಕಾ ಪಡುಕೋಣೆ ಅವರಿಗೆ ಇಂದು ಜನ್ಮದಿನದ ಸಂಭ್ರಮ. 1986 ಜನವರಿ 5 ರಂದು ಜನಿಸಿದ ನಟಿ ದೀಪಿಕಾ ಪಡುಕೋಣೆ ಅವರು ಭಾರತೀಯ ಚಿತ್ರರಂಗದ ಪ್ರಮುಖ ನಟಿ ಗುರುತಿಸಿಕೊಂಡಿದ್ದಾರೆ. ನಟಿ ದೀಪಿಕಾ ಪಡುಕೋಣೆ ಅವರು ಚಿತ್ರರಂಗಕ್ಕೆ ಬರುವ ಮುನ್ನ ಮಾಡೆಲಿಂಗ್ ಮಾಡುತ್ತಿದ್ದರು.
ಇನ್ನೂ 2006 ರಲ್ಲಿ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ `ಐಶ್ವರ್ಯ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ ದೀಪಿಕಾ, ನಂತರ ಅದೇ ವರ್ಷ ಬಾಲಿವುಡ್ ನ ಶಾರುಖ್ ಖಾನ್ ಅಭಿನಯದ `ಓಂ ಶಾಂತಿ ಓಂ’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿ ಮೊದಲ ಸಿನಿಮಾದಲ್ಲೇ ಯಶಸ್ಸು ಗಳಿಸಿದರು.
ಮುಂದೆ ಲವ್ ಆಜ್ ಕಲ್, ಕಾಕ್ ಟೈಲ್, ಚೆನ್ನೈ ಎಕ್ಸ್ಪ್ರೆಸ್, ಹೇ ಜವಾನಿ ಹಾಯ್ ದಿವಾನಿ, ಹ್ಯಾಪಿ ನ್ಯೂ ಇಯಾರ್, ಬಾಜಿರಾವ್ ಮಸ್ತಾನಿ, ಪದ್ಮಾವತಿ, ರಾಮ್ ಲೀಲಾ, ಪೀಕು ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಬಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿಯಾಗಿ ಬೆಳೆದ ನಟಿ ದೀಪಿಕಾ ಪಡುಕೋಣೆ ಅವರು ಉತ್ತಮ ನಟನೆಗಾಗಿ ಮೂರು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದುಕೊಂಡಿದ್ದು, ಹಾಲಿವುಡ್, ಕಾಲಿವುಡ್ ಮತ್ತು ಟಾಲಿವುಡ್ ನಲ್ಲೂ ಸಹ ಅಭಿನಯಿಸಿದ್ದಾರೆ.
ಈ ನಮ್ಮ ಕರುನಾಡ ಮನೆ ಮಗಳು ದೀಪಿಕಾ ಪಡುಕೋಣೆ ಅವರಿಗೆ ಹುಟ್ಟು ಹಬ್ಬದ ಸಂಭ್ರಮವಾದ ಇಂದು ಸಿನಿಮಾ ರಂಗದ ಗಣ್ಯರು ಸೇರಿದಂತೆ ಅಭಿಮಾನಿಗಳು ಶುಭ ಕೋರಿದ್ದಾರೆ.




