ಚೆನ್ನೈ: ಸದ್ಯ ಪುಷ್ಪಾ 2 ರಿಲೀಸ್ ಡೇಟ್ ಸಮೀಪಿಸುತ್ತಿದ್ದು, ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ ಮತ್ತೆ ತೆರೆ ಮೇಲೆ ಮಿಂಚೋಕೆ ರೆಡಿ ಆಗಿದ್ದಾರೆ. ಈ ನಡುವೆ ಮತ್ತೊಂದು ವಿಚಾರಕ್ಕೆ ಇದೀಗ ರಶ್ಮಿಕಾ ಸಕತ್ ಸದ್ದು ಮಾಡುತ್ತಿದ್ದಾರೆ. ಅದೇನೆಂದರೆ ರಶ್ಮಿಕಾ ರೆಸ್ಟೋರೆಂಟ್ ಒಂದರಲ್ಲಿ ಕುಳಿತು ಊಟ ಮಾಡುತ್ತಿರುವ ಫೋಟೋವೊಂದು ಸದ್ಯ ವೈರಲ್ ಆಗಿದ್ದು, ಅದರಲ್ಲಿ ನಟ ವಿಜಯ್ ದೇವರಕೊಂಡ ಜೊತೆಗಿರುವುದು ಸಾಕಷ್ಟು ಸದ್ದು ಮಾಡಿದೆ.
ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಒಟ್ಟಾಗಿ ಕಾಣಿಸಿಕೊಂಡಿರುವುದು ಇದೇ ಮೊದಲೇನಲ್ಲ. ಈ ರೀತಿ ಹಲವು ಬಾರಿ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಈ ಜೋಡಿ ಡೇಟಿಂಗ್‌ನಲ್ಲಿರುವ ಸುಳಿವನ್ನು ಫ್ಯಾನ್ಸ್‌ಗೆ ನೀಡಿದ್ದಾರೆ. ಇಬ್ಬರೂ ಒಟ್ಟಾಗಿ ನಟಿಸಿದ ಗೀತಾ ಗೋವಿಂದಂ ಮತ್ತು ಡಿಯರ್ ಕಾಮ್ರೆಡ್ ಚಿತ್ರದ ಬಳಿಕ ಈ ಜೋಡಿ ಕದ್ದುಮುಚ್ಚಿ ಡೇಟಿಂಗ್ ಮಾಡುತ್ತಿದ್ದು ಆಗಾಗ ಇವರಿಬ್ಬರೂ ಒಟ್ಟಾಗಿರುವ ಫೋಟೋಗಳು ಹರಿದಾಡುತ್ತಿರುತ್ತವೆ.
ಸದ್ಯ ವೈರಲ್ ಆಗಿರುವ ಫೋಟೋದಲ್ಲಿ ರಶ್ಮಿಕಾ ಡೆನಿಮ್ ಜೊತೆ ನೀಲಿ ಬಣ್ಣದ ಕ್ರಾಪ್ ಟಾಪ್ ಧರಿಸಿದ್ದಾರೆ. ಅವರ ಎದುರಿಗೆ ಕುಳಿತಿರುವ ವಿಜಯ್ ದೇವರಕೊಂಡ ಬಿಳಿ ಟೀಶರ್ಟ್, ಚೆಕ್ಡ್ ಶರ್ಟ್ ಮತ್ತು ಡೆನಿಮ್ ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹರಿದಾಡುತ್ತಿದ್ದಂತೆ ಅಭಿಮಾನಿಗಳು ಪ್ರತಿಕ್ರಿಯಿಸಲು ಆರಂಭಿಸಿದ್ದು, ಅನೇಕರು ಇವರನ್ನು ಮುದ್ದಾದ ಜೋಡಿ ಎಂದು ಕರೆಯುತ್ತಿದ್ದಾರೆ.