ಶಿರಸಿ: ಇತ್ತೀಚೆಗೆ ಕ್ಯಾನ್ಸರ್ ಚಿಕಿತ್ಸೆ ನಿಮಿತ್ತ ಅಮೇರಿಕಾಕ್ಕೆ ತೆರಳಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಹ್ಯಾಟ್ರಿಕ್ ಹೀರೋ ಡಾ. ಶಿವರಾಜಕುಮಾರ್‌ರನ್ನು ಭೇಟಿಯಾಗಲು ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ವಿದೇಶಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಎಲ್ಲರೊಂದಿಗೆ ಸರಳವಾಗಿ ಎಲ್ಲರಂತೆ ಇದ್ದ ಶಾಸಕ ಭೀಮಣ್ಣರ ಸರಳತೆಯನ್ನು ಗೀತಾ ಶಿವರಾಜಕುಮಾರ ಮೆಚ್ಚಿಕೊಂಡು ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ.
“ನಿಮ್ಮೆಲ್ಲರ ಪ್ರೀತಿಯ ಭೀಮಣ್ಣ ನನಗೆ ಭೀಮ್ ಮಾಮ. ಅಂದಿನಿಂದ ಇಲ್ಲಿಯವರೆಗೆ ಸ್ವಲ್ಪ ಕೂಡ ಬದಲಾಗದ ವ್ಯಕ್ತಿತ್ವ. ಮಾತು, ಕೋಪ ತುಂಬಾ ಕಡಿಮೆ, ಆದರೆ ಕೆಲಸ ಎಲ್ಲರಿಗಿಂತ ಜಾಸ್ತಿ. ಯಾವತ್ತೂ ಕಡಿಮೆ ಆಗದ ಪ್ರೀತಿ ವಿಶ್ವಾಸ. ಅವರಿಗೆ ಕುಟುಂಬದವರಾಗಲಿ, ಊರಿನ ಜನರಾಗಲಿ ಎಲ್ಲರೂ ಒಂದೇ.
ಮಾಮ ಅಮೆರಿಕಾದ ಮಿಯಾಮಿ ಅಲ್ಲಿ ಶಿವಣ್ಣ ಅವರ ಟ್ರೀಟ್ಮೆಂಟ್ ಸಮಯದಲ್ಲಿ ಎರಡು ವಾರ ನಮ್ಮ ಜೊತೆಗೆ ಇದ್ದರು. ನನ್ನ ಕೆಲಸಗಳಿಗೆ ಸಹಾಯ, ಶಿವಣ್ಣ ಜೊತೆಗೆ ವಾಕಿಂಗ್, ಕಾಫಿ, ಹಾಸ್ಪಿಟಲ್ ಭೇಟಿಗೆ ಜೊತೆಗೆ ಇರುತ್ತಿದ್ದರು. ಕತ್ತಲಾದಾಗ ಅವರ ಮೊಬೈಲ್ ಫೋನಿಗೆ ಮುಂಜಾವು. ಅವರ ಕ್ಷೇತ್ರದ ಜನರ ಕರೆಗಳು ಬರುತ್ತಿದ್ದವು. ಎಲ್ಲರ ಜೊತೆ ಸ್ವಲ್ಪವೂ ಬೇಜಾರಿಲ್ಲದೆ ಮಾತನಾಡುತಿದ್ದರು. ದೂರದ ಊರಿನಲ್ಲಿದರೂ, ಕ್ಷೇತ್ರ ಹಾಗೂ ಕ್ಷೇತ್ರದ ಜವಾಬ್ದಾರಿಯನ್ನು ಎಂದಿಗೂ ನಿರ್ಲಕ್ಷ್ಯ ಮಾಡಲಿಲ್ಲ.
ನಮ್ಮ ಪ್ರೀತಿಯ ಭೀಮ್ ಮಾಮ, ನಿಮಗೆ ಶಾಸಕರು. ನಮ್ಮ ಕುಟುಂಬದ ಸುಖ ದುಃಖ ಎರಡರಲ್ಲೂ ಸದಾ ಜೊತೆಗೆ ನಿಂತವರು. ನಿಮ್ಮ ಶಾಸಕರಾಗಿ ಅವರು ಸದಾ ನಿಮ್ಮ ಜೊತೆಯಲ್ಲಿ ನಿಂತಿರಲಿ ಹಾಗೂ ಅವರ ಮತ್ತು ನಿಮ್ಮ ಮುಗುಳ್ನಗೆ ಎಂದಿಗೂ ಮಾಸದಿರಲಿ ಎಂದು ಎಂದು ದೇವರಲ್ಲಿ ನಾನು ಹಾಗೂ ಶಿವ ರಾಜಕುಮಾರ್ ಅವರು ಕೇಳಿಕೊಳ್ಳುತೇವೆ” ಎಂದು ಆತ್ಮೀಯವಾಗಿ ಶಾಸಕರ ಗುಣಗಳನ್ನು ಗೀತಾ ಶಿವರಾಜಕುಮಾರ ಕೊಂಡಾಡಿದ್ದಾರೆ.