ಹೂವಿನ ಹಡಗಲಿ: ಹೂವಿನ ಹಡಗಲಿ ಕಾಂಗ್ರೆಸ್ ನಾಯಕರ ರಾಜೀನಾಮೆ ಪರ್ವ ಮುಂದುವರೆದಿದ್ದು, ಹೂವಿನ ಹಡಗಲಿ ಕ್ಷೇತ್ರದ ಕಾಂಗ್ರೆಸ್ ಪಾಳೆಯದಲ್ಲಿ ಅಸಮಾಧಾನ ಭುಗಿಲೆದ್ದ ಪರಿಣಾಮ, ಮೂರೂ ಜನ ನಾಯಕರು ಒಂದೇ ದಿನ ರಾಜೀನಾಮೆ ಸಲ್ಲಿಸಿದ್ದಾರೆ.
ಹೌದು, ಹೂವಿನ ಹಡಗಲಿ ಕ್ಷೇತ್ರದ ಪಿಟಿ ಪರಮೇಶ್ವರ್ ನಾಯಕ್ ಅವರ ಬಲಗೈ ಬಂಟರೆಂದೇ ಹೇಳಲಾದ ಇಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಐಗೋಳ್ ಚಿದಾನಂದ್, ಹೂವಿನ ಹಡಗಲಿ ಬ್ಲಾಕ್ ಅಧ್ಯಕ್ಷರಾದ ಎಂ ಪರಮೇಶ್ವರಪ್ಪ ಹಾಗು ವಿಜಯನಗರ ಜಿಲ್ಲಾ ಉಪಾಧ್ಯಕ್ಷರಾದ ವಾರದ ಗೌಸ್ ಮೊಯಿದ್ದೀನ್ ಅವರು ತಮ್ಮ ಸ್ತನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಕ್ಷೇತ್ರದ ಈ ಮೂರೂ ಜನ ನಾಯಕರು ವೈಯಕ್ತಿಕ ಕಾರಣದಿಂದ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿಕೆ ನೀಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಬಿವಿ ಶಿವಯೋಗಿ ಮೂಲಕ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಹೆಸರಿಗೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ
ಪಿಟಿ ಪರಮೇಶ್ವರ್ ನಾಯಕ್ ಮೇಲೆ ಅಸಮಾಧಾನ…!
ಹೂವಿನ ಹಡಗಲಿ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಭಿನ್ನಮತ ಉಲ್ಭಣಗೊಳ್ಳುತ್ತಿದ್ದು, ಕಾಂಗ್ರೆಸ್ ಪಾಳಯದಲ್ಲಿ ಎಲ್ಲವೂ ಸರಿಯಿಲ್ಲವೆಂದು ಕಾಣಿಸುತ್ತಿದೆ. ಅಷ್ಟೇ ಅಲ್ಲ, ಇಲ್ಲಿನ ಸ್ಥಳೀಯ ಶಾಸಕರಾದ ಪಿಟಿ ಪರಮೇಶ್ವರ್ ನಾಯಕ್ ಮೇಲೆ ಅಸಮಾಧಾನಗೊಂಡು ಈ ಮೂವರು ನಾಯಕರು ರಾಜೀನಾಮೆ ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಮೂರೂ ಜನ ನಾಯಕರು ಶಾಸಕರಾದ ಪಿಟಿ ಪರಮೇಶ್ವರ್ ನಾಯಕ್ ಅವರ ಬಲಗೈ ಬಂಟರೆಂದೇ ಗುರುತಿಸಿಕೊಂಡಿದ್ದರು..
ಹರಪನಹಳ್ಳಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿ ಅರ್ಜಿ..
ಇನ್ನು, ಹೂವಿನ ಹಡಗಲಿ ಕಾಂಗ್ರೆಸ್ ನ ಮೂರೂ ನಾಯಕರು ವೈಯಕ್ತಿಕ ಕಾರಣದಿಂದ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದು, ಇದರಲ್ಲಿ ಐಗೋಳ್ ಚಿದಾನಂದ್, ವಾರದ ಗೌಸ್ ಮೊಯಿದ್ದೀನ್ ಅವರು ಹರಪನಹಳ್ಳಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿದ್ದು, ಕುತೂಹಲಕ್ಕೆ ಕಾರಣವಾಗಿದೆ.