ದಾವಣಗೆರೆ: ‘ಸರ್ಕಾರಿ ನೌಕರರಿಗೆ 7ನೇ ವೇತನ ಭತ್ಯೆ ಪರಿಷ್ಕರಣೆ & ಹಳೆ ಪಿಂಚಣಿ ಯೋಜನೆ ಮರುಜಾರಿಗೆ ತರಬೇಕು ಎಂಬ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಾರ್ಚ್ 1ರಂದು ನಡೆಸುತ್ತಿರುವ ಮುಷ್ಕರವನ್ನು ಲಿಖಿತ ಭರವಸೆ ನೀಡುವವರೆಗೂ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಹೇಳಿದ್ದಾರೆ.
ಹೌದು, ನಿನ್ನೆ ಇಲ್ಲಿನ ಪಿ.ಬಿ. ರಸ್ತೆಯ ಕಮ್ಮವಾರಿ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರ, ರಾಜ್ಯ ಮಟ್ಟದ ಪದಾಧಿಕಾರಿಗಳ ಶೈಕ್ಷಣಿಕ ಸಮಾವೇಶ ಹಾಗೂ ಸರ್ವ ಸದಸ್ಯರ ಮಹಾಸಭೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು, ‘7ನೇ ವೇತನ ಆಯೋಗದಿಂದ ಶೀಘ್ರ ಮಧ್ಯಂತರ ವರದಿ ಪಡೆದು ಜಾರಿ ಮಾಡುವಂತೆ ಈ ಹಿಂದಿನಿಂದಲೂ ಒತ್ತಾಯಿಸುತ್ತಿದ್ದು, ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಇನ್ನು, ಈ ಬಾರಿಯ ಬಜೆಟ್‌ನಲ್ಲಿ ಘೋಷಣೆ ಮಾಡುವ ನಿರೀಕ್ಷೆ ಇತ್ತು. ಆದೂ ಕೂಡ ಹುಸಿಯಾಗಿದ್ದು, ಮಾರ್ಚ್ 1ರಿಂದ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಸರ್ಕಾರಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದು, ಎಲ್ಲರೂ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ದ್ವಾರಕೀಶ ನಾಯ್ಕ್, ಡಿ.ಡಿ. ಹಾಲಪ್ಪ, ಡಿ.ಎಂ. ಮಂಜುನಾಥಯ್ಯ, ಬಿ.ಆರ್. ಚಂದ್ರಪ್ಪ, ಸಿದ್ದೇಶ್ ಸಿ, ಸಿದ್ದೇಶಪ್ಪ, ಅನಿತಾ ಡಿ, ಪ್ರೇಮಾ ಎನ್, ಸವಿತಾ ಎಸ್, ಮಮತಾ ಎಚ್ ಇದ್ದರು.
ಮುಷ್ಕರ: ರಾಜ್ಯದಲ್ಲಿ ಮಾ.1ರಿಂದ ಸಂಪೂರ್ಣ ಬಂದ್!
ರಾಜ್ಯದಲ್ಲಿ ಮಾ.1ರಿಂದ ಆಸ್ಪತ್ರೆ, ಶಾಲೆ, ಕಚೇರಿ, ಸಾರಿಗೆ ಸೇರಿ ಎಲ್ಲ ಸರ್ಕಾರಿ ಸೇವೆಗಳು ಬಂದ್ ಆಗಲಿದೆ. 7ನೇ ವೇತನ ಆಯೋಗ ಜಾರಿ ಒತ್ತಾಯಿಸಿ ಸರ್ಕಾರಿ ನೌಕರರ ಸಂಘ ಹಮ್ಮಿಕೊಂಡಿರುವ ಮುಷ್ಕರಕ್ಕೆ ಶಿಕ್ಷಕರು, KSRTC-BMTC, ಆಸ್ಪತ್ರೆ & ಇತರೆ ಇಲಾಖೆ ಸಿಬ್ಬಂದಿ ಬೆಂಬಲ ನೀಡಿದ್ದು ಆ ದಿನ ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ತುರ್ತುಸೇವೆ ಹೊರತುಪಡಿಸಿ ಉಳಿದೆಲ್ಲ ಸೇವೆಗಳು ಸ್ಥಗಿತಗೊಳ್ಳಲಿದ್ದು, ಯಾವುದೇ ಪರೀಕ್ಷೆಗಳೂ ನಡೆಯುವುದಿಲ್ಲ ಎಂದು ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ತಿಳಿಸಿದ್ದಾರೆ.