ಹರಿಹರ: ಫೆಬ್ರುವರಿ 8 ಮತ್ತು 9ರಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ನಡೆಯುವ 5ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎಸ್.ವಿ. ರಾಮಚಂದ್ರ ಹೇಳಿದ್ದಾರೆ.
ಹೌದು, ಗುರುಪೀಠದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಎಸ್.ವಿ. ರಾಮಚಂದ್ರ ಅವರು, ‘ಸಮಾಜ ಸಂಘಟನೆ ಮತ್ತು ಜಾಗೃತಿಗಾಗಿ ಪ್ರತಿ ವರ್ಷ ಮಹರ್ಷಿ ವಾಲ್ಮೀಕಿ ಜಾತ್ರೆ ಆಚರಿಸಲಾಗುತ್ತಿದೆ. ಕರೋನ ಕಾರಣದಿಂದ ಎರಡು ವರ್ಷ ಜಾತ್ರೆ ನಡೆಸದೇ, ಸರಳವಾಗಿ ಧಾರ್ಮಿಕ ಆಚರಣೆಗಳನ್ನು ಪೂರೈಸಲಾಗಿತ್ತು. ಆದರೆ ಈ ವರ್ಷ ಪ್ರಸನ್ನಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ಜಾತ್ರೆ ನಡೆಸಲು ನಿರ್ಣಯಿಸಲಾಗಿದೆ’ ಎಂದು ಹೇಳಿದರು.
ಇನ್ನು, ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ಮಠದ 25ನೇ ವಾರ್ಷಿಕೋತ್ಸವ, ಪ್ರಸನ್ನಾನಂದ ಸ್ವಾಮೀಜಿ 16ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ, ಲಿಂ.ಪುಣ್ಯಾನಂದಪುರಿ ಶ್ರೀಗಳ 15ನೇ ಪುಣ್ಯಾರಾಧನೆ ಹಾಗೂ ನೂತನ ವಾಲ್ಮೀಕಿ ರಥದ ಲೋಕಾರ್ಪಣೆಯಾಗಲಿದೆ. ಈಗಾಗಲೇ ಶ್ರೀಗಳು ಜಾತ್ರೆ ಹಿನ್ನೆಲೆಯಲ್ಲಿ ರಾಜ್ಯದ 161 ತಾಲ್ಲೂಕುಗಳಿಗೆ ಭೇಟಿ ನೀಡಿ ಭಕ್ತರನ್ನು ಆಹ್ವಾನಿಸಿದ್ದು, 4 ರಿಂದ 5 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಹೇಳಿದರು.
ಅಷ್ಟೇ ಅಲ್ಲ, ಸರ್ಕಾರ ಸಮುದಾಯದ ಬಹುದೊಡ್ಡ ಬೇಡಿಕೆಯಾದ ಎಸ್ಟಿ ಮೀಸಲಾತಿ ಹೆಚ್ಚಿಸಿರುವುದು ಮತ್ತು 2 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ 63 ಅಡಿ ಎತ್ತರದ ವಾಲ್ಮೀಕಿ ರಥ ಲೋಕಾರ್ಪಣೆಯಾಗುತ್ತಿರುವುದು ಈ ವರ್ಷದ ಜಾತ್ರೆಗೆ ಮತ್ತಷ್ಟು ಸಡಗರ ತಂದಿದೆ’ ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು.
ಕಾರ್ಯಕ್ರಮದ ವಿವರ ಹೀಗಿದೆ:
ಫೆಬ್ರುವರಿ 8ರಂದು ಬೆಳಿಗ್ಗೆ 7ಕ್ಕೆ ರಾಜನಹಳ್ಳಿಯಿಂದ ಶ್ರೀಮಠದವರಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರ ಭವ್ಯ ಮೆರವಣಿಗೆ, ನಂತರ ಮಠದ ಆವರಣದಲ್ಲಿ ವಾಲ್ಮೀಕಿ ಧ್ವಜಾರೋಹಣ ನೆರೆವೇರಿಸುವುದು.
ಬೆಳಗ್ಗೆ 8.30ಕ್ಕೆ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ ಜರಗಲಿದ್ದು, ಬೆಳಿಗ್ಗೆ 9 ರಿಂದ 11.30ರವರೆಗೆ ಮಹಿಳಾ ಗೋಷ್ಠಿ ಮತ್ತು ಮಧ್ಯಾಹ್ನ 12 ರಿಂದ 2.30ರವರೆಗೆ ಉದ್ಯೋಗ ಮೇಳ ನಡೆಯಲಿದೆ.
ಮಧ್ಯಾಹ್ನ 3ರಿಂದ 5ರ ವರೆಗೆ ರೈತ ಗೋಷ್ಠಿ ನಡೆಸಲಿದ್ದು, ಸಂಜೆ 6ರಿಂದ 8.30ರವರೆಗೆ ಬುಡಕಟ್ಟು ಸಾಂಸ್ಕೃತಿಕ ವೈಭವ ನಡೆಯಲಿದೆ.
ಇನ್ನು, ಫೆಬ್ರುವರಿ 9ರಂದು ಬೆಳಿಗ್ಗೆ 9ಕ್ಕೆ ನಾಡಿನ ವಿವಿಧ ಶ್ರೀಗಳು ಮಹರ್ಷಿ ವಾಲ್ಮೀಕಿ ನೂತನ ರಥಕ್ಕೆ ಚಾಲನೆ ನೀಡುವರು.