ಮ್ಯಾಂಡಸ್ ಚಂಡಮಾರುತದ ಪರಿಣಾಮ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಳೆ ಹೆಚ್ಚಾಗುತ್ತಿದೆ. ಇದರಿಂದ ಹಲವು ಜನರಿಗೆ ಶೀತ, ಕೆಮ್ಮು, ಜ್ವರದ ಜತೆ ಡೆಂಗ್ಯೂ ಮತ್ತು ಚಿಕನ್ ಗುನ್ಯಾ ಪ್ರಕರಣ ಹೆಚ್ಚಾಗುತ್ತಿದ್ದು, ಜನರು ಆತಂಕದಲ್ಲಿದ್ದಾರೆ. ರಾಜ್ಯದಲ್ಲಿ ಈ ವರ್ಷ 8000ಕ್ಕೂ ಅಧಿಕ ಡೆಂಗ್ಯೂ ಕೇಸ್‌ಗಳು ಪತ್ತೆಯಾಗಿದ್ದು, ಕಳೆದ 12 ದಿನಗಳಲ್ಲಿ 209 ಪ್ರಕರಣಗಳು ದಾಖಲಾಗಿದ್ದು ಐವರು ಪ್ರಾಣ ಕಳೆದುಕೊಂಡಿದ್ದರಾರೆ.
ಹೌದು, BBMP ವ್ಯಾಪ್ತಿಯಲ್ಲಿ 1698, ಮೈಸೂರು 722, ಉಡುಪಿ 497 ಹೆಚ್ಚು ಪ್ರಕರಣಗಳನ್ನು ಹೊಂದಿದ ಜಿಲ್ಲೆಗಳಾಗಿವೆ. ಇದರ ಜೊತೆಗೆ ಚಿಕುನ್ ಗುನ್ಯಾ ಪ್ರಕರಣಗಳ ಸಂಖ್ಯೆಯಲ್ಲೂ ಏರಿಕೆ ಕಂಡಿದ್ದು 2047 ಪ್ರಕರಣಗಳು ದಾಖಲಾಗಿವೆ. ಮಳೆ ಹೆಚ್ಚಾದ ಹಿನ್ನಲೆಯಲ್ಲಿ ಈ ಸಂಖ್ಯೆ ಮತ್ತಷ್ಟು ಅಧಿಕವಾಗಬಹುದು ಎಂದು ಆರೋಗ್ಯ ಇಲಾಖೆ ಹೇಳಿದೆ.
ಡೆಂಗ್ಯೂ ರೋಗ ಲಕ್ಷಣಗಳೇನು?
ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಅದರ ರೋಗ ಲಕ್ಷಣಗಳ ಬಗ್ಗೆ ತಜ್ಞರು ಮಾಹಿತಿ ನೀಡಿದ್ದಾರೆ. ಡೆಂಗ್ಯೂ ಪೀಡಿತ ವ್ಯಕ್ತಿಗೆ ಸಾಮಾನ್ಯವಾಗಿ 104 ಡಿಗ್ರಿ ಜ್ವರ, ವಿಪರೀತ ತಲೆ ನೋವು, ಮೈಕೈ ನೋವು ಇರುತ್ತದೆ ಎಂದಿದ್ದಾರೆ. ಇದರ ಜೊತೆಗೆ ಹಸಿವಿನ ಕೊರತೆಯೂ ಉಂಟಾಗಬಹುದು.
ವಾಕರಿಕೆ, ವಾಂತಿ, ಕಣ್ಣಿನ ಹಿಂಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ದೇಹದ ಮೇಲೆ ಅಲ್ಲಲ್ಲಿ ಕಲೆಗಳು ಗೋಚರಿಸಿದರೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ಅವರು ಸಲಹೆ ನೀಡಿದ್ದಾರೆ.