ಉಳಿತಾಯ ಎಂಬುದು ಮಧ್ಯಮ ವರ್ಗದ ಬಹುದೊಡ್ಡ ಆಸ್ತಿಯಾಗಿದ್ದು, ಈ ನಡುವೆ ಹೆಚ್ಚು ಬಡ್ಡಿ ನೀಡುವ ಸುಕನ್ಯಾ ಯೋಜನೆ ಬಗ್ಗೆ ಹಲವರಿಗೆ ತಿಳಿದಿಲ್ಲ. ಹೆಣ್ಣು ಮಗುವಿನ ಭವಿಷ್ಯಕ್ಕಾಗಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದ್ದು, ಈ ಯೋಜನೆಯ ಬಡ್ಡಿ ದರವನ್ನು ತ್ರೈಮಾಸಿಕ ಆಧಾರದ ಮೇಲೆ ಪರಿಶೀಲಿಸಲಾಗುತ್ತದೆ.
2022 ರ ಅಕ್ಟೋಬರ್-ಡಿಸೆಂಬರ್ ಗಾಗಿ ಕೇಂದ್ರವು ಇತ್ತೀಚೆಗೆ ಬಡ್ಡಿದರವನ್ನು ಶೇಕಡಾ 7.6 ಕ್ಕೆ ಏರಿಸಿದ್ದು, ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಮೊತ್ತದ ಮೇಲೆ ಯಾವುದೇ ನಷ್ಟದ ಅಪಾಯವಿಲ್ಲ. ಸ್ಥಿರ ಆದಾಯವನ್ನು ಪಡೆಯಬಹುದಾಗಿದ್ದು, ಇದರಲ್ಲಿ ತಿಂಗಳಿಗೆ 500 ರೂ ಹೂಡಿಕೆ ಮಾಡಿ 2.5 ಲಕ್ಷ ರೂ ಆದಾಯ ಪಡೆಯಬಹುದು.
ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು10 ವರ್ಷದೊಳಗಿನ ಹೆಣ್ಣು ಮಗುವಿನ ಹೆಸರಿನಲ್ಲಿ ತೆರೆಯಬಹುದು. ಹುಡುಗಿಗೆ 18 ವರ್ಷ ತುಂಬಿದ ನಂತರ, ಅವಳು ಈ ಯೋಆನೆಯ ಖಾತೆದಾರಳಾಗುತ್ತಾಳೆ. ಒಂದು ಕುಟುಂಬದಲ್ಲಿ ಗರಿಷ್ಠ ಇಬ್ಬರು ಹೆಣ್ಣು ಮಕ್ಕಳಿಗೆ ಈ ಖಾತೆಯನ್ನು ತೆರೆಯಬಹುದಾಗಿದ್ದು, ಈ ಖಾತೆ ಸೇವೆಗಳನ್ನು ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಪಡೆಯಬಹುದು.
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಕನಿಷ್ಠ ಆರಂಭಿಕ ಠೇವಣಿ ರೂ.250 ಆಗಿದ್ದು, ಇದರಲ್ಲಿ ಪ್ರತಿ ಹಣಕಾಸು ವರ್ಷದಲ್ಲಿ ಕನಿಷ್ಠ ರೂ.250 ಮತ್ತು ಗರಿಷ್ಠ ರೂ 1.5 ಲಕ್ಷ ಹೂಡಿಕೆ ಮಾಡಬಹುದು. ಹೆಣ್ಣು ಮಗುವಿಗೆ 22 ವರ್ಷ ತುಂಬುವ ವೇಳೆಗೆ ಹೂಡಿಕೆ 90 ಸಾವಿರ ರೂ ಆಗುತ್ತದೆ. ಇದರ ಮೇಲೆ ರೂ.1,64,606 ಬಡ್ಡಿ ಸಿಗುತ್ತದೆ. ಮೆಚ್ಯೂರಿಟಿ ಸಮಯದಲ್ಲಿ ಒಟ್ಟು ರೂ.2,54,606 ಸಿಗುತ್ತದೆ.