ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದ್ದು, ಪಕ್ಷದ ಹಿರಿಯ ನಾಯಕರೂ ಆಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಅಧ್ಯಕ್ಷ ಸ್ಥಾನ ಅಲಂಕರಿಸುವುದು ಬಹುತೇಕ ಖಚಿತ ಎನ್ನಲಾಗಿದ್ದು, ಖರ್ಗೆಗೆ ಎದುರಾಳಿಯಾಗಿ ಸಂಸದ ಶಶಿ ತರೂರ್ ಕಣದಲ್ಲಿದ್ದಾರೆ.
ಈ ಚುನಾವಣೆಯಿಂದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ದೂರ ಉಳಿದಿದ್ದು, ಕಾಂಗ್ರೆಸ್‌ನ 9 ಸಾವಿರ ಪ್ರತಿನಿಧಿಗಳು ಮತದಾನ ಮಾಡಲಿದ್ದು, ಅ.19ರಂದು ಫಲಿತಾಂಶ ಹೊರಬೀಳಲಿದೆ.
ಯಾರೆಲ್ಲಾ ಮತದಾನ ಮಾಡಲಿದ್ದಾರೆ?
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಮತದಾನದಲ್ಲಿ 9,100 ಮಂದಿ ಮತ ಚಲಾಯಿಸುವ ಅರ್ಹತೆ ಹೊಂದಿದ್ದಾರೆ. ಕಾಂಗ್ರೆಸ್ ಶಾಸಕರು, ಸಂಸದರು, ಪದಾಧಿಕಾರಿಗಳು, ಪ್ರದೇಶ ಕಾಂಗ್ರೆಸ್ ಮಾಜಿ, ಹಾಲಿ ಅಧ್ಯಕ್ಷರು..ಹೀಗೆ ನಿಗದಿಪಡಿಸಲಾದ 9,100 ಮಂದಿ ಮತದಾನ ಮಾಡಲಿದ್ದಾರೆ.
ವೋಟಿಂಗ್‌ಗೆ ಬ್ಯಾಲೆಟ್ ಪೇಪರ್ ಬಳಸಲಾಗುತ್ತಿದ್ದು, ರಹಸ್ಯ ಮತದಾನ ನಡೆಯಲಿದೆ. ಬೆ.10 ರಿಂದ ಸಂಜೆ 4 ಗಂಟೆಯವರೆಗೆ ಮತದಾನಕ್ಕೆ ಅವಕಾಶವಿದೆ. ದೆಹಲಿ, ರಾಜ್ಯಗಳಲ್ಲಿನ ಪಕ್ಷದ ಮುಖ್ಯ ಕಚೇರಿಯಲ್ಲಿ ಮತದಾನ ನಡೆಯಲಿದೆ.