ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ ಎರಡು, ಮೂರು ದಿನಗಳ ಕಾಲ ಮಳೆಯಾಗಲಿದೆ. ಈಗಾಗಲೇ ರಾಜ್ಯದ 19 ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಉಳಿದ ಕೆಲ ಜಿಲ್ಲೆಗಳಲ್ಲಿ ಮುಂಜಾನೆ ಮೋಡ ಕವಿದ ವಾತಾವರಣದಿಂದ ಕೂಡಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನು, ದಕ್ಷಿಣ ಒಳನಾಡಿನ ಬೆಂಗಳೂರು, ಮೈಸೂರು, ಮಂಡ್ಯ, ಮಡಿಕೇರಿ, ರಾಮನಗರ, ಹಾಸನ, ಚಾಮರಾಜನಗರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಂಜೆ ವೇಳೆಗೆ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಿರಂತರ ಮಳೆಗೆ ಬೆಂಗಳೂರು ತತ್ತರ: ಯೆಲ್ಲೋ ಅಲರ್ಟ್ ಘೋಷಣೆ
ಬೆಂಗಳೂರಲ್ಲಿ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆ ನಿನ್ನೆ ಸಂಜೆ 7 ಗಂಟೆ ಬಳಿಕ ಸತತ ಮಳೆಯಾಗಿದ್ದು, ಇಂದು ಸಹ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್ ನೀಡಿದೆ.
ಮಳೆಯಿಂದ ತಗ್ಗು ಪ್ರದೇಶದ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದ್ದು, ಶಿವಾನಂದ ವೃತ್ತ, ಎಂ.ಜಿ. ರಸ್ತೆ, ಡಬಲ್ ರೋಡ್, ಆನಂದ್‌ರಾವ್ ವೃತ್ತ, ಮಲ್ಲೇಶ್ವರ, ಶೇಷಾದ್ರಿ ರಸ್ತೆ, ಮೆಜೆಸ್ಟಿಕ್, ಚಾಮರಾಜಪೇಟೆ, ಶೇಷಾದ್ರಿಪುರಂ, ಸಹಿತ ಹಲವು ಬಡಾವಣೆಗಳಲ್ಲಿ ಮಳೆಯಾಗುತ್ತಿದೆ. ಮಳೆ ಸುರಿದ ಕಾರಣ ಕಚೇರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದವರು ಪರದಾಡುವಂತಾಗಿದ್ದು, ಒಕಳಿಪುರ ಕೆಳಸೇತುವೆ, ಶಿವಾನಂದ ವೃತ್ತ, ಕಾವೇರಿ ಜಂಕ್ಷನ್ ಸಹಿತ ಹಲವು ರಸ್ತೆಗಳು, ಕೆಳಸೇತುವೆಗಳಲ್ಲಿ ನೀರು ನಿಂತು ತೊಂದರೆ ಉಂಟಾಗಿದೆ.
ಪ್ರಮುಖ ಜಿಲ್ಲೆಗಳ ತಾಪಮಾನ:
ಬೆಂಗಳೂರು: 27-19, ಮಂಗಳೂರು: 30-24, ಶಿವಮೊಗ್ಗ: 29-21, ಬೆಳಗಾವಿ: 28-21,ಮೈಸೂರು: 28-21, ಮಂಡ್ಯ: 29-21, ಮಡಿಕೇರಿ: 24-17, ರಾಮನಗರ: 29-21, ಹಾಸನ: 27-19, ಚಾಮರಾಜನಗರ: 28-21, ಚಿಕ್ಕಬಳ್ಳಾಪುರ: 26-19, ಕೋಲಾರ: 27-20, ತುಮಕೂರು: 28-21,ಉಡುಪಿ: 30-24, ಕಾರವಾರ: 31-25, ಚಿಕ್ಕಮಗಳೂರು: 26-19, ದಾವಣಗೆರೆ: 28-21 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.