ತಿರುವನಂತಪುರಂ: ಒಂದು ವರ್ಷದ ಹಿಂದಷ್ಟೇ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಯುವ ವೈದ್ಯೆ ತನ್ನ ಗಂಡನ ಮನೆಯವರ ವರದಕ್ಷಿಣೆ ಕಿರುಕುಳದಿಂದಾಗಿ ಆತ್ಮಹತ್ಯೆಗೆ ಶರಣಾದ ಘಟನೆ ಕೇರಳದ ಕೊಲ್ಲಂನ ಗಂಡನ ಮನೆಯಲ್ಲಿ ನಡೆದಿದೆ.
24 ವರ್ಷದ ಎಸ್.ವಿ ವಿಸ್ಮಯ ಮೃತ ದುರ್ದೈವಿಯಾಗಿದ್ದು, ಸೋಮವಾರ ಬೆಳಗ್ಗೆ ಯುವತಿ ನೇಣಿಗೆ ಶರಣಾಗಿದ್ದು, ಈಗಾಗಲೇ ಗಂಡ ಕಿರಣಕುಮಾರ್ ಎಂಬುವರನ್ನು ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನು ಮೃತ ಎಸ್.ವಿ ವಿಸ್ಮಯ ಸಾವಿಗೂ ಮುನ್ನ ತಾನು ಗಂಡನ ಮನೆಯಲ್ಲಿ ಅನುಭವಿಸಿದ್ದ ಕಷ್ಟವನ್ನ ವಾಟ್ಸಾಪ್ ಮತ್ತು ಫೇಸ್ ಬುಕ್ ನಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ.
ವರದಕ್ಷಿಣೆ ರೂಪದಲ್ಲಿ ಕಾರು ನೀಡುವಂತೆ ಮೇಲಿಂದ ಮೇಲೆ ಗಂಡ ಕಿರಣಕುಮಾರ್ ತನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ವಿಸ್ಮಯ ಸೋದರ ಸಂಬಂಧಿಗೆ ಸಂದೇಶ ರವಾನೆ ಮಾಡಿದ್ದು, ಅದರ ಫೇಸ್ ಬುಕ್ ಚಾಟ್ ಕೂಡ ಇದೀಗ ವೈರಲ್ ಆಗಿದೆ. ಇನ್ನು ಈ ಸಂದರ್ಭದಲ್ಲಿ ಇದು ನನ್ನ ಕೊನೆ ಫೋಸ್ಟ್ ಕೂಡ ಆಗಬಹುದು ಎಂದು ವಿಸ್ಮಯ ಹೇಳಿಕೊಂಡಿದ್ದು, ಈ ಹಿಂದೆ ಕೂಡ ಅನೇಕ ಸಲ ಕ್ರೂರವಾಗಿ ಥಳಿಸಿದ್ದಾನೆಂದು ಆರೋಪಿಸಿದ್ದಾಳೆ.
ಆಯುರ್ವೇದ ಔಷಧ ಮತ್ತು ಶಸ್ತ್ರಚಿಕಿತ್ಸೆ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ವಿಸ್ಮಯ 2020ರಲ್ಲಿ ಮೋಟಾರು ವಾಹನ ವಿಭಾಗದ ಅಧಿಕಾರಿಯಾಗಿದ್ದ ಎಸ್. ಕಿರಣಕುಮಾರ್ ಜೊತೆ ಸಪ್ತಪದಿ ತುಳಿದಿದ್ದರು. ಮದುವೆ ಸಮಯದಲ್ಲಿ 1 ಎಕರೆ ಜಮೀನು ಮತ್ತು ಕಾರನ್ನು ವರದಕ್ಷಿಣೆ ರೂಪದಲ್ಲಿ ನೀಡಿತ್ತು. ಆದರೆ ಇದರಿಂದ ತೃಪ್ತಿಯಾಗದ ಪತಿ ಕಿರಣಕುಮಾರ್ ತನಗೆ ಕಾರಿನ ಬದಲಿಗೆ ಹಣ ನೀಡುವಂತೆ ಮೇಲಿಂದ ಮೇಲೆ ಕಿರುಕುಳ ನೀಡುತ್ತಿದ್ದನು ಎಂಬ ಆರೋಪ ಕೇಳಿ ಬಂದಿದ್ದು, ಮಹಿಳೆ ಮೇಲೆ ಹಲ್ಲೆ ನಡೆಸಲಾಗಿರುವ ಫೋಟೋ ಸಹ ವೈರಲ್ ಆಗಿದ್ದು, ಮಹಿಳಾ ಆಯೋಗ ಕೂಡ ಪ್ರಕರಣ ದಾಖಲು ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.